ಮುನಿರಾಬಾದ್ ಮಹೆಬೂಬ್‌ನಗರ ರೈಲ್ವೆ ಯೋಜನೆಗೆ 26 ವರ್ಷಸಿಂಧನೂರಿಗೆ ಎಂದು ಬಂದೀತು ರೈಲು !

Spread the love

ನಮ್ಮ ಸಿಂಧನೂರು, ಜನವರಿ 28
ಜನರ ಬಹುದಿನದ ಬೇಡಿಕೆಯಾದ ಮುನಿರಾಬಾದ್-ಮಹೆಬೂಬ್‌ನಗರ ಯೋಜನೆಗೆ ಚಾಲನೆ ದೊರೆತು ಬರೋಬ್ಬರಿ 26 ವರ್ಷಗಳು ಗತಿಸಿವೆ. ಎರಡೂವರೆ ದಶಕಗಳಲ್ಲಿ ಯೋಜನೆ ಹತ್ತು ಹಲವು ಕಾರಣಗಳಿಂದ ತೆವಳುತ್ತ ಸಾಗಿರುವುದಕ್ಕೆ ಕಾಲಾವಧಿಯೇ ಸಾಕ್ಷಿಯಾಗಿದೆ. ಟಿಕೆಟ್ ಬುಕಿಂಗ್ ಮಾಡಿ ರೈಲ್ವೆ ಬೋಗಿಗಳಲ್ಲಿ ಓಡಾಡಬೇಕೆಂಬ ಸಿಂಧನೂರಿಗರ ಅಭಿಲಾಶೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ಕೆಲಸ-ಕಾರ್ಯಗಳು ಬಾಕಿ ಉಳಿದ ಕಾರಣ ಸಿಂಧನೂರು ಸ್ಟೇಶನ್‌ಗೆ ರೈಲು ಬರುವುದು ಇನ್ನಷ್ಟ ತಡವಾಗಲಿದೆ ಎಂದು ಹೇಳಲಾಗುತ್ತಿದೆ.

Namma Sindhanuru Click For Breaking & Local News


ಈ ಯೋಜನೆ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನಷ್ಟೇ ಅಲ್ಲದೇ ಅಂತಾರಾಜ್ಯದ ವಾಣಿಜ್ಯ ಕೇಂದ್ರಗಳನ್ನು ಬೆಸೆಯುವುದರಿಂದ ಬಹಳಷ್ಟು ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಈಗಾಗಲೇ ಗಂಗಾವತಿ, ಕಾರಟಗಿಯಿಂದ ಹುಬ್ಬಳ್ಳಿ, ಬೆಂಗಳೂರಿಗೆ ರೈಲು ಓಡುತ್ತಿದ್ದು, ಅಲ್ಲಿನ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದೆ.
ಸಿಂಧನೂರು ತಾಲೂಕಿನವರು ಪ್ರಸ್ತುತ ಕಾರಟಗಿ ಸ್ಟೇಶನ್‌ನಿಂದ ಹುಬ್ಬಳ್ಳಿ, ಬೆಂಗಳೂರಿಗೆ ತೆರಳುವಂತಾಗಿದೆ. ಗಂಗಾವತಿ ನಗರ ಮತ್ತು ಕಾರಟಗಿ ಪಟ್ಟಣಕ್ಕಿಂತಲೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರಮುಖ ಜಂಕ್ಷನ್ ಆಗಿರುವ ಸಿಂಧನೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ವಿವಿಧ ಉದ್ದೇಶಗಳಿಗಾಗಿ ಹುಬ್ಬಳ್ಳಿ, ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಆದರೆ ಕಾಮಗಾರಿ ಬಾಕಿ ಇರುವ ಕಾರಣ ರೈಲು ಓಡಾಟ ಶುರುವಾಗದೇ ಇರುವುದು ಸಮಸ್ಯೆಯಾಗಿದೆ.

Namma Sindhanuru Click For Breaking & Local News

ಅನುದಾನದ ಕೊರತೆ, ವೆಚ್ಚದ ಹೆಚ್ಚಳ
ಪ್ರಾರಂಭದಲ್ಲಿ 1723 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಆರಂಭಗೊಂಡ ಕಾಮಗಾರಿ ಪ್ರಸ್ತುತ ಸಂದರ್ಭದಲ್ಲಿ ವೆಚ್ಚದ ಮಿತಿ ಹೆಚ್ಚಳಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸದೇ ಇರುವುದರಿಂದ ಈ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, ಕಾಲಮಿತಿಯೊಳಗೆ ಪೂರ್ಣಗೊಳ್ಳುವಲ್ಲಿ ವಿಫಲವಾಗಿದೆ. ಈ ಯೋಜನೆ ಚುರುಕುಗೊಳ್ಳದೇ ಇರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಭಾಗದ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಒತ್ತಡ ಹೇರದಿರುವುದೂ ಒಂದು ಕಾರಣ ಎಂಬುದು ಜನಸಾಮಾನ್ಯರ ಆಪಾದನೆಯಾಗಿದೆ.

Namma Sindhanuru Click For Breaking & Local News

ಸಿಂಧನೂರು ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಪೂರಕ
ರಾಯಚೂರು ಜಿಲ್ಲೆಯಲ್ಲಿ ಪ್ರಮುಖ ವ್ಯಾಪಾರ-ವಹಿವಾಟಿನ ತಾಣವಾಗಿರುವ ಸಿಂಧನೂರು ನಗರ ರೈಲ್ವೆ ಯೋಜನೆಯಿಂದ ಇನ್ನಷ್ಟು ಜಿಗಿತ ಕಾಣಲಿದೆ. ಭತ್ತದ ಮಾರುಕಟ್ಟೆ ಸೇರಿದಂತೆ ಇನ್ನಿತರೆ ವ್ಯಾಪಾರ-ವಹಿವಾಟಿನ ಉದ್ದೇಶದಿಂದಾಗಿ ಇಲ್ಲಿನ ವ್ಯಾಪಾರಸ್ಥರು ಹುಬ್ಬಳ್ಳಿ, ಬೆಂಗಳೂರು ಓಡಾಟ ಸಾಮಾನ್ಯವಾಗಿದ್ದು, ರೈಲ್ವೆ ಪ್ರಯಾಣ ಆರಂಭವಾದರೆ ಇನ್ನಷ್ಟು ಅನುಕೂಲವಾಗಲಿದೆ. ಗೂಡ್ಸ್ ರೈಲು ಓಡಾಟದಿಂದ ಸರಕು ಸಾಗಣೆ ಸುಲಭ-ಸಾಧ್ಯವಾಗಲಿದ್ದು, ಭತ್ತ ಸೇರಿದಂತೆ ಇನ್ನಿತರೆ ಕೃಷಿ ಉತ್ಪನ್ನಗಳನ್ನು ಬೇರೆಡೆ ಸುಲಭವಾಗಿ ಸಾಗಿಸಲು ಸಹಕಾರಿಯಾಗಲಿದೆ. ಈಗಾಗಿ ರೈಲ್ವೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ.

Namma Sindhanuru Click For Breaking & Local News

ಇವತ್ತು, ನಾಳೆ, ನಾಡಿದ್ದು…
ಸಿಂಧನೂರು ರೈಲ್ವೆ ಸ್ಟೇಶನ್ ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುತ್ತದೆ. ನಾಳೆ, ನಾಡಿದ್ದು, ಇನ್ನು ಹತ್ತಿರ.. ಹೀಗೆ ಹತ್ತಾರು ದಿನಾಂಕಗಳು ಬದಲಾಗಿ ಹೋಗಿವೆ. ರಾಜಕೀಯ ಗಿಮಿಕ್‌ಗಾಗಿ ಚುನಾಯಿತ ಪ್ರತಿನಿಧಿಗಳು ಪ್ರಗತಿ ಹಂತದಲ್ಲಿರುವ ರೈಲ್ವೆ ಸ್ಟೇಶನ್‌ಗೆ ಬಂದು ಒಂದು ಸುತ್ತು ಹಾಕಿ ಹೋಗುವುದು ಸಾಮಾನ್ಯ ಸಂಗತಿಯಾಗಿ ಹೋಗಿದ್ದು, ಇಲ್ಲಿಯವರೆಗೂ ರೈಲು ಓಡಾಟ ಆರಂಭವಾಗದೇ ಇರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಇರುವುದನ್ನು ಗಮನಿಸಿರುವುದನ್ನು ನೋಡಿದರೆ ಉದ್ಘಾಟನೆ ದಿನ ಇನ್ನಷ್ಟು ಮುಂದಕ್ಕೆ ಹೋಗಬಹುದು ಎಂಬುದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

Namma Sindhanuru Click For Breaking & Local News

‘ರಿಯಲ್ ಎಸ್ಟೇಟ್’ ಜಿಗಿತ
ಇನ್ನೂ ಸಿಂಧನೂರಿಗೆ ರೈಲೇ ಬಂದಿಲ್ಲ, ಆಗಲೇ ರೈಲ್ವೆ ಸ್ಟೇಶನ್ ಆಸುಪಾಸು, ರೈಲ್ವೆ ಯೋಜನಾ ಪ್ರದೇಶದ ಅಕ್ಕಪಕ್ಕದಲ್ಲಿರುವ ಭೂಮಿಗಳಿಗೆ ಭಾರಿ ಬೇಡಿಕೆ ಬಂದಿದ್ದು, ಈ ಭೂಮಿಗಳು ರಿಯಲ್ ಎಸ್ಟೇಟ್ ಪಾಲಾಗುತ್ತಿವೆ. ಯೋಜನಾ ವ್ಯಾಪ್ತಿಯ ಬಳಿಯಿರುವ ಕಾರಣಕ್ಕೆ ಈ ಜಮೀನುಗಳ ಮಾಲೀಕರಿಗೆ ರಿಯಲ್ ಎಸ್ಟೇಟ್ ಏಜೆಂಟ್‌ಗಳು ದುಂಬಾಲು ಬೀಳುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ. ಭೂಮಿ ಖರೀದಿಸಿ, ಎನ್‌ಎ ಪ್ಲಾಟ್ ಆಗಿ ಪರಿವರ್ತಿಸಲು ಹಣ ವಿನಿಯೋಗಿಸಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಎರಡ್ಮೂರು ವರ್ಷಗಳಲ್ಲಿ ಈ ಭಾಗ ಗುರುತೇ ಸಿಗದಂತೆ ಬದಲಾವಣೆ ಕಾಣುವುದರಲ್ಲಿ ಯಾವುದೇ ಅಚ್ಚರಿಯೇನಿಲ್ಲ ಎಂದು ಅವರು ಹೇಳುತ್ತಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *