ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 23
ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯಾಗಿ, ನೈಜ ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧರಾಗಿ ಮೇ 17, 18ರಂದು ನಗರದ ಸತ್ಯಾಗಾರ್ಡನ್‌ನಲ್ಲಿ ಎರಡು ದಿನಗಳ ಕಾಲ ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ರಾಜ್ಯಮಟ್ಟದ 11ನೇ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ ಎಂದು ಮೇ ಸಾಹಿತ್ಯ ಮೇಳದ ಸಂಚಾಲಕರು ಹಾಗೂ ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಮೇಳದಲ್ಲಿ ಸ್ಥಳೀಯ, ರಾಜ್ಯ ಹಾಗೂ ರಾಷ್ಟçಮಟ್ಟದ ಚಿಂತಕರು, ಹೋರಾಟಗಾರರು ಭಾಗವಹಿಸುಸುತ್ತಾರೆ. ಜನರ ಸಹಭಾಗಿತ್ವದಲ್ಲಿ ಈ ಮೇಳ ನಡೆಯಲಿದೆ. ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಸಂದರ್ಭದಲ್ಲಿ, ಫ್ಯಾಶಿಷ್ಟ ಪ್ರಭುತ್ವದ ದಮನಕಾರಿ ನೀತಿಗಳನ್ನು ಪ್ರತಿರೋಧಿಸುವ ಭಾಗವಾಗಿ ಜನಚಳವಳಿಯ ಮಾಸವಾದ ಮೇ ತಿಂಗಳಲ್ಲಿ ಪ್ರತಿವರ್ಷ ಮೇ ಮೇಳ ಆಯೋಜಿಸುತ್ತ ಬರಲಾಗುತ್ತಿದೆ. ಅದರ ಭಾಗವಾಗಿ ಈ ಬಾರಿ ಸಿಂಧನೂರಿನಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
‘ಪ್ರಭುತ್ವದಿಂದ ಭಿನ್ನಮತ ದಮನಿಸುವ ನಡೆ’
ಫ್ಯಾಶಿಸ್ಟ್ ಪ್ರಭುತ್ವ ಭಿನ್ನಮತ ಹೊಂದಿದ ಜನಸಮೂಹ ಹಾಗೂ ಬರಹಗಾರರ ದನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರತಿಭಟನಾತ್ಮಕ ಸಾಹಿತ್ಯ ರಚಿಸಿದರೆ ಅದನ್ನು ನಿಷೇಧಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರö್ಯದ ಬೆಂಬಲವಾಗಿ ಮತ್ತು ಪ್ರಭುತ್ವದ ದಮನದ ವಿರುದ್ಧ ಜನರ ಧ್ವನಿಯಾಗಿ ಮೇ ಸಾಹಿತ್ಯ ಮೇಳ ಇಲ್ಲಿಯವರೆಗೂ ನಡೆಯುತ್ತ ಬಂದಿದೆ. ಬಂಡಾಯ ಸಾಹಿತ್ಯದ ಆಶಯಗಳನ್ನು ಮುಂದುವರಿಸಿಕೊAಡು ಹೋಗಲಾಗುತ್ತಿದೆ. ಇವತ್ತಿನ ಕಾಲದ ಅಭಿವ್ಯಕ್ತಿ ಸ್ವಾತಂತ್ರö್ಯವನ್ನು ಕಾಪಾಡಿಕೊಳ್ಳಬೇಕಿದೆ. ವರ್ತಮಾನದ ಪ್ರಭುತ್ವ ಶರಣಾಗತಿಯನ್ನು ಬಯಸುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂವಿಧಾನ ಬಾಹಿರ ಕೆಲಸಗಳು ನಡೆಯುತ್ತಿವೆ ಎಂದು ಸೂಳಿಬಾವಿ ಖೇದ ವ್ಯಕ್ತಪಡಿಸಿದರು.
‘ಬರಹಗಾರ ಜನರ ನೋವಿಗೆ ಮಿಡಿಯಬೇಕು’
ಶೆಲ್ಲಿಯವರು ಬರಹಗಾರರನ್ನು ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಬರಹಗಾರ ಎಂದಿಗೂ ಪ್ರಭುತ್ವದ ಅಧೀನತೆಗೆ ಒಳಗಾಗಬಾರದು. ಪ್ರತಿರೋಧದ ದನಿಯಾಗಿ ಯಾವಾಗಲೂ ಜನರ ನೋವಿಗೆ ಮಿಡಿಯಬೇಕು. ಜನಪರವಾಗಿ ಧ್ವನಿ ಎತ್ತುವ ಬರಹಗಾರ ಹಾಗೂ ಲೇಖಕನಿಗೆ ಪ್ರಭುತ್ವ ಇನ್ನಿಲ್ಲದ ಆಮಿಷವೊಡ್ಡುತ್ತದೆ. ನೈಜ ಬರಹಗಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತ ಬರಲಾಗುತ್ತಿದೆ ಎಂದು ಅವರು ಹೇಳಿದರು.
‘ಜನಸಾಹಿತ್ಯದ ಮೇಲೆ ಕಾರ್ಪೋರೇಟ್ ಸಾಹಿತ್ಯದ ದಾಳಿ’
ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣದ ಭಾಗವಾಗಿ ಇಂದು ಕಾರ್ಪೋರೇಟ್ ಸಾಹಿತ್ಯ, ಜನಸಾಹಿತ್ಯದ ಮೇಲೆ ದಾಳಿ ನಡೆಸುತ್ತಿದೆ. ಜನರ ಬದುಕಿನ ಪ್ರಶ್ನೆಗಳನ್ನು ಕುರಿತ ಸಾಹಿತ್ಯ ಮತ್ತು ನೈಜ ಚರಿತ್ರೆಯನ್ನು ಮರೆಮಾಚುವ ಹುಸಿ ಸಾಹಿತ್ಯವನ್ನು ಹೇರಳವಾಗಿ ಹೇರಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆನ್ನುವಂತೆ ಇತ್ತೀಚೆಗೆ ಓತಪ್ರೋತವಾಗಿ ನಡೆಯುತ್ತಿರುವ ಲಿಟರರಿ ಫೆಸ್ಟಿವಲ್‌ಗಳೇ ಸಾಕ್ಷಿ. ಲಿಟರರಿ ಫೆಸ್ಟಿವಲ್‌ಗಳ ಹೆಸರಿನಲ್ಲಿ ಜನ ಸಾಹಿತ್ಯವನ್ನು ದೂರೀಕರಿಸುವ ವ್ಯವಸ್ಥಿತ ಹುನ್ನಾರ ಅಡಗಿದ್ದು, ಕಾರ್ಪೋರೇಟ್ ಶಕ್ತಿಗಳ ಆಶಯಕ್ಕೆ ಪೂರಕವಾಗಿ ಸಾಹಿತ್ಯ ರಚಿಸುವ ಅಜೆಂಡಾಗಳು ಮುನ್ನೆಲೆಗೆ ಬರುತ್ತಿವೆ ಎಂದು ಸೂಳಿಬಾವಿ ಅವರು ವಿಶ್ಲೇಷಿಸಿದರು.
‘ಸಿಂಧನೂರು ಜಿಲ್ಲಾ ಕೇಂದ್ರವಾಗಲಿ’
ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ಅದರಲ್ಲೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿಗೆ ಅದರದ್ದೇ ಆದ ಮಹತ್ವವಿದೆ. ಇದು ಹೋರಾಟದ ನೆಲ; ಜನಚಳವಳಿ ಕಟ್ಟಿದ ಸ್ಥಳ, ಹಾಗಾಗಿ ಮೊಟ್ಟ ಮೊದಲ ಬಾರಿಗೆ ಸಿಂಧನೂರು ತಾಲೂಕು ಕೇಂದ್ರದಲ್ಲಿ ರಾಜ್ಯಮಟ್ಟದ ಮೇಳ ಆಯೋಜಿಸಲಾಗಿದೆ. ಸಿಂಧನೂರು ಜಿಲ್ಲಾ ಕೇಂದ್ರವಾಗುವ ಎಲ್ಲ ರೀತಿಯ ಸಾಮರ್ಥ್ಯವನ್ನು ಹೊಂದಿದೆ. ಮೇಳದ ಕೊನೆಗೆ ಕೈಗೊಳ್ಳುವ ನಿರ್ಣಯದಲ್ಲಿ ಜಿಲ್ಲಾ ಕೇಂದ್ರ ರಚನೆಯಾಗಬೇಕೆಂಬ ಹಕ್ಕೊತ್ತಾಯವೂ ಇರಲಿದೆ ಎಂದು ಬಸವರಾಜ ಸೂಳಿಬಾವಿ ಹೇಳಿದರು.
“ಅಸಮಾನ ಭಾರತ, ಸಮಾಜನತೆಗಾಗಿ ಸಂಘರ್ಷ: ಅಂದು-ಇAದುಮುಖ್ಯ ಥೀಮಿನಡಿ ಮೇ ಮೇಳ : ಚಂದ್ರಶೇಖರ ಗೊರಬಾಳ
ಮೇ ಸಾಹಿತ್ಯ ಮೇಳ ಬಳಗದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಮೇ, 17-18ರಂದು ನಡೆಯುವ ಸಾಹಿತ್ಯ ಮೇಳ “ಅಸಮಾನ ಭಾರತ, ಸಮಾಜನತೆಗಾಗಿ ಸಂಘರ್ಷ: ಅಂದು-ಇಂದು” ಎಂಬ ಮುಖ್ಯ ಥೀಮಿನಡಿ ನಡೆಯಲಿದೆ. ಪ್ರಭುತ್ವದ ನೀತಿಗಳು ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಗಾಧ ಅಂತರವನ್ನು ಸೃಷ್ಟಿಸಿವೆ. ಆರ್ಥಿಕ, ಸಾಮಾಜಿ, ರಾಜಕೀಯ ಅಸಮಾನತೆ ಮಿತಿ ಮೀರಿದೆ. ಕೃಷಿಕರು, ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿ-ಯುವಜನರು ಹಾಗೂ ಎಲ್ಲ ವರ್ಗದ ದುಡಿಯುವ ಜನರು ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನ ಚಳವಳಿಯ ಭಾಗವಾಗಿ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ ಸ್ಥಳೀಯ, ರಾಜ್ಯ ಹಾಗೂ ರಾಷ್ಟçಮಟ್ಟದ ಚಿಂತಕರು, ಬುದ್ಧಿಜೀವಿಗಳು ಹಾಗೂ ಹೋರಾಟಗಾರರು ಪಾಳ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ದೇವೇಂದ್ರಗೌಡ, ಮಂಜುನಾಥ ಗಾಂಧಿನಗರ, ಗಂಗಮ್ಮ ಗೊರಬಾಳ, ಡಿ.ಎಚ್.ಕಂಬಳಿ, ಬಸವರಾಜ ಬಾದರ್ಲಿ, ಹುಸೇನ್‌ಸಾಬ್, ಶಂಕರ ಗುರಿಕಾರ, ತಾಯಪ್ಪ ತಿಡಿಗೋಳ, ಬಸವರಾಜ ಹಸಮಕಲ್ ಸೇರಿದಂತೆ ಇನ್ನಿತರರು ಇದ್ದರು.