ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 17
ನಗರದ ಪ್ರಮುಖ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಾಯಂಕಾಲ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ವತಿಯಿಂದ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರು ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೇ ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ಹಾಗೂ ಜೀವನೋಪಾಯಕ್ಕೆ ಎದುರಾಗಿರುವ ಸವಾಲುಗಳ ಬಗ್ಗೆ ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಸಂತ್ರಸ್ತ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಚ್.ಪೂಜಾರ್ ಅವರು, “ತೆರವಿನಿಂದ ಸಂತ್ರಸ್ತರಾಗಿರುವ ಬೀದಿ ಬದಿ ವ್ಯಾಪಾರಿಗಳು ನಿರಂತರ ತಮ್ಮ ಕಷ್ಟ-ಕಾರ್ಪಣ್ಯವನ್ನು ನಮ್ಮ ಗಮನಕ್ಕೆ ತಂದಿದ್ದು, ಈ ಕುರಿತು ಹಲವು ಬಾರಿ ಈಗಾಗಲೇ ಶಾಸಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ಈ ನಡುವೆಯೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಇಲ್ಲಿಯವರೆಗಿನ ಎಲ್ಲ ಬೆಳವಣಿಗೆಗಳನ್ನು ಮತ್ತೊಮ್ಮೆ ಪೌರಾಯುಕ್ತರೊಂದಿಗೆ ಚರ್ಚಿಸಿ ಆದಷ್ಟು ಬೇಗ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಇಂದು ಬೆಳಿಗ್ಗೆ ಹೋರಾಟ ಸಮಿತಿಯ ನಿಯೋಗ ತೆರಳಿ ಒತ್ತಾಯಿಸಿದ್ದೇವೆ. ಅವರೂ ಸಹ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರಿಗೆ ಕಾಯ್ದೆಯ ಅಡಿ ಹಾಗೂ ಮಾನವೀಯತೆಯ ನೆಲೆಗಟ್ಟಿನಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿಗಳು, ಶಾಸಕರೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಅವರೂ ಸ್ಪಂದಿಸಿದ್ದಾರೆ. ಹಾಗಾಗಿ ಹಂತ ಹಂತವಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೊದಲು ಕುಷ್ಟಗಿ ಮಾರ್ಗದಲ್ಲಿ ಸಮಸ್ಯೆ ಸರಿಪಡಿಸಿ ತದನಂತರ ಉಳಿದ ಕಡೆ ಹಂತ ಹಂತವಾಗಿ ಸಮಸ್ಯೆ ಸರಿಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಎಲ್ಲ ವ್ಯಾಪಾರಸ್ಥರೂ ಸಹಕರಿಸಬೇಕು. ಒಂದು ವೇಳೆ ಬೀದಿ ಬದಿ ವ್ಯಾಪಾರಸ್ಥರನ್ನು ಜಿಲ್ಲಾ, ತಾಲೂಕು ಆಡಳಿತ ಕಡೆಗಣಿಸಿದ್ದೇ ಆದರೆ, ಮುಂದೆ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವ ಮೂಲಕ ಚಳವಳಿಗೆ ಇಳಿಯೋಣ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಸ್ಥರು ಆತಂಕಪಡುವುದು ಬೇಡ: ಚಂದ್ರಶೇಖರ ಗೊರಬಾಳ
ಇಂದು ಬೆಳಿಗ್ಗೆ ನಗರಸಭೆ ಪೌರಾಯುಕ್ತರೊಂದಿಗೆ ಬೀದಿ ಬದಿ ವ್ಯಾಪಾರಸ್ಥರು ಕಳೆದ 3 ತಿಂಗಳಿAದ ಜೀವನ ನಿರ್ವಹಣೆಗಾಗಿ ಅನುಭವಿಸುತ್ತಿರುವ ಯಾತನೆಯನ್ನು ಹಾಗೂ ಅವರು ಪೊಲೀಸರಿಂದ ಅನುಭವಿಸುತ್ತಿರುವ ಕಿರುಕುಳವನ್ನು ತಿಳಿಸಿದ್ದೇವೆ. ಜೊತೆಗೆ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರದ ದೃಷ್ಟಿಯಿಂದಲೂ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳಿಗೆ ಹಾಗೂ ಶಾಸಕರ ಗಮನಕ್ಕೆ ತಂದು ಮುಂದುವರಿಯುವುದಾಗಿ ಹೇಳಿದ್ದಾರೆ. ಹಾಗಾಗಿ ಯಾರೂ ಆತಂಕಪಡುವುದು ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಹುಸೇನ್‌ಸಾಬ್, ಬಿ.ಎನ್.ಯರದಿಹಾಳ, ಮಂಜುನಾಥ ಗಾಂಧಿನಗರ, ರಮೇಶ ಪಾಟೀಲ್ ಬೇರಿಗಿ ಸೇರಿದಂತೆ 100ಕ್ಕೂ ಹೆಚ್ಚು ಬೀದಿ ವ್ಯಾಪಾರಸ್ಥರು ಅದರಲ್ಲೂ ವಿಶೇಷವಾಗಿ ಮಹಿಳಾ ವ್ಯಾಪಾರಸ್ಥರು ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.
