ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ಸ್ವಾತಂತ್ರ್ಯ ನಂತರ ಸಹಕಾರಿ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು, ರೈತರು ಸೇರಿದಂತೆ ವಿವಿಧ ಜನಸಮುದಾಯಗಳ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಹಿಂದೆ ಪ್ರತಿ ಊರಿಗೆ ಒಂದು ಸಹಕಾರಿಗಳು ರಚನೆಯಾಗಬೇಕೆಂಬುದು ಗಾಂಧೀಜಿಯವರ ಕನಕಸಾಗಿತ್ತು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಸಹಕಾರಿ ರಂಗ ದಾಪುಗಾಲಿಟ್ಟಿದೆ ಎಂದು ಮಾಜಿ ಸಚಿವ ಹಾಗೂ ಕೆಒಎಫ್ ರಾಜ್ಯಾಧ್ಯಕ್ಷ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು.
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿ.ರಾಯಚೂರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಗಳೂರು ವತಿಯಿಂದ, ಸೌಹಾರ್ದ ಸಹಕಾರಿ ದಿನಾಚರಣೆಯ ರಜತ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ 6200ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಮಲ್ಟಿ ಕೋ ಆಪರೇಟಿವ್ ಬ್ಯಾಂಕುಗಳ ಸಹ ಕಾರ್ಯವಿಸ್ತರಣೆ ಮಾಡಿಕೊಂಡಿವೆ. ಯಾವುದೇ ಸಹಕಾರಿ ಬ್ಯಾಂಕುಗಳು ಏಳಿಗೆಯಾಗಬೇಕಾದರೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಅನವಶ್ಯಕ ಹಸ್ತಕ್ಷೇಪದಿಂದ ಸಹಕಾರಿಗಳ ಬೆಳವಣಿಗೆಗೆ ಸಮಸ್ಯೆಯಾಗುತ್ತದೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಸದಸ್ಯರೊಂದಿಗಿನ ಉತ್ತಮ ಹೊಂದಾಣಿಕೆಯಿಂದ ಸಹಕಾರಿಗಳು ಲಾಭ ಗಳಿಸಲು ಸಾಧ್ಯ. ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಹಕಾರಿಗಳು ಉಳಿಯುತ್ತವೆ. ಇಲ್ಲದೇ ಹೋದರೆ ಆರ್ಥಿಕ ನಷ್ಟ ಗ್ಯಾರಂಟಿ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎನ್ನುವ ಧ್ಯೇಯೋದ್ದೇಶದೊಂದಿಗೆ ಆರಂಭಗೊಂಡಿರುವ ಸೌಹಾರ್ದ ಸಹಕಾರಿಗಳು ಇಂದು ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಿದ್ದು, ಅದಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಹಸೀಲ್ದಾರ್ ಅರುಣ್.ಹೆಚ್.ದೇಸಾಯಿ, ಪೌರಾಯುಕ್ತ ಮಂಜುನಾಥ ಗುಂಡೂರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಬಸವರಾಜ ನಾಡಗೌಡ, ರಾ.ಸಂ.ಸ.ನಿ.ನಿರ್ದೇಶಕರಾದ ಆರ್.ತಿಮ್ಮಯ್ಯ ಶೆಟ್ಟಿ, ಬಸವರಾಜ ನಾಡಗೌಡ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಯ್ಯ.ಎಂ, ಕ.ರಾ.ನೌ.ಸಂಘ ಅಧ್ಯಕ್ಷ ಚಂದ್ರಶೇಖರ, ಜಿಲ್ಲಾ ಒಕ್ಕೂಟದ ನಿರ್ದೇಶಕ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಹುಸೇನಸಾಬ್, ಜಿಲ್ಲಾ ಸಂಯೋಜಕ ನಟರಾಜ, ಅಂದಾನಪ್ಪ ಗುಂಡಳ್ಳಿ ಮಸ್ಕಿ, ಗ್ಯಾನಪ್ಪ ಕನ್ನಾಪೇಟೆ ಸೇರಿದಂತೆ ಇನ್ನಿತರರು ಇದ್ದರು.