ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 6
ಹಿಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಿರುವ ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಗದ್ದೆಗಳಲ್ಲಿ ಅಲ್ಲಲ್ಲಿ ಬೆಂಕಿ ರೋಗ (ಕೊಳವೆ ಹುಳು) ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ. ಸಸಿ ಮಡಿಯಲ್ಲಿ ಕಂಡುಬಂದ ರೋಗ, ನಾಟಿಯ ನಂತರವೂ ಉಲ್ಬಣಿಸಿ ಕೆಲ ರೈತರ ಜಮೀನುಗಳು ಸಂಪೂರ್ಣ ರೋಗಭಾದೆಗೀಡಾಗಿದ್ದು, ಆರಂಭದಲ್ಲೇ ನಷ್ಟಕ್ಕೀಡಾಗಿದ್ದಾರೆ.
ಸಿಂಧನೂರು ತಾಲೂಕಿನ ಮಲ್ಕಾಪುರ, ಸಾಸಲಮರಿ, ಬೂದಿಹಾಳಕ್ಯಾಂಪ್, ಸಾಸಲಮರಿಕ್ಯಾಂಪ್ ಹಾಗೂ ಮಸ್ಕಿ ತಾಲೂಕಿನ ಬಳಗಾನೂರು, ರಂಗಾಪುರ, ಗೌಡನಬಾವಿ, ಗೌಡನಬಾವಿ ಕ್ಯಾಂಪ್ ಸೇರಿದಂತೆ ಇನ್ನಿತರೆ ಗ್ರಾಮಗಳ ರೈತರ ಜಮೀನಿನ ಭತ್ತಕ್ಕೆ ರೋಗ ತಗುಲಿದ್ದು, ಹತೋಟಿಗೆ ಇನ್ನಿಲ್ಲದ ಹರಸಾಹಸ ಮಾಡಿದರೂ ರೋಗ ಉಪಶಮನ ವಾಗದಿರುವುದರಿಂದ ದಿಕ್ಕು ತೋಚದಂತಾಗಿದೆ.
ಏನಿದು ಬೆಂಕಿ ರೋಗ ?
ಈ ರೋಗ ತಗುಲಿದ ಭತ್ತದ ತಾಕುಗಳಲ್ಲಿ ಬೆಳೆಯ ಗರಿಗಳ ಮೇಲೆ ಆರಂಭದಲ್ಲಿ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ಚುಕ್ಕೆಗಳ ಮಧ್ಯ ಭಾಗವು ಬೂದು ಬಣ್ಣ ಹೊಂದಿರುತ್ತದೆ. ಕ್ರಮೇಣ ಈ ಚುಕ್ಕೆಗಳು ದಿನದಿಂದ ದಿನಕ್ಕೆ ದೊಡ್ಡದಾಗಿ ಒಂದಕ್ಕೊAದು ಕೂಡಿಕೊಂಡು, ಎಲೆ ಒಣಗಿ ಬೆಳೆ ಸುಟ್ಟಂತೆ ಕಾಣಿಸುತ್ತದೆ. ಇದು ಈ ರೋಗದ ಲಕ್ಷಣ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ರೈತರಿಗೆ ಬರೆ ಹಾಕಿದ ಬೆಂಕಿ ರೋಗ
ಭತ್ತಕ್ಕೆ ಬರುವ ರೋಗಗಳಲ್ಲಿ ತೀವ್ರತರನಾದ ರೋಗವೆಂದರೆ ಬೆಂಕಿ ರೋಗ (ಕೊಳವೆ ಹುಳು). ಇದರಿಂದ ಕೆಲವೊಂದು ಬಾರಿ ಸಂಪೂರ್ಣ ನಷ್ಟವಾಗುವುದುಂಟು. ಸಸಿಮಡಿಯಿಂದ ಹಿಡಿದು ಕಾಳು ಕಟ್ಟುವವರೆಗೂ ಈ ರೋಗ ಕಂಡುಬಂದ ಸಾಕಷ್ಟು ಉದಾಹರಣೆಗಳಿವೆ. ಸಸಿಮಡಿಯಲ್ಲಿ ಅಥವಾ ನಾಟಿ ಮಾಡಿದ ಪೈರಿನಲ್ಲಿ ಮೊದಲಿಗೆ ಎಲೆಗಳ ಮೇಲೆ ತಿಳಿಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳು ದೊಡ್ಡದಾಗಿ ವಜ್ರಾಕಾರ ಹೊಂದುತ್ತವೆ. ರೋಗ ತೀವ್ರವಾದಂತೆ ಚುಕ್ಕೆಗಳು ಹೆಚ್ಚಾಗಿ ಸಸಿಯನ್ನು ಸಂಪೂರ್ಣವಾಗಿ ಆವರಿಸಿ ಒಣಗಲು ಕಾರಣವಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ರೈತರು ಕೊಳವೆ ಹುಳು ರೋಗ ಎನ್ನುವುದಕ್ಕಿಂತಲೂ ಬೆಂಕಿರೋಗ ಎಂದೇ ಕರೆಯುವುದೇ ಜಾಸ್ತಿ. ಇದರಿಂದ ಸಾಕಷ್ಟು ಸಲ ಹಾನಿಗೀಡಾಗಿದ್ದೇವೆ. ಈ ರೋಗ ತಗುಲಿದ ಭತ್ತದ ಎಲೆಯ ಮೇಲಷ್ಟೆ ಅಲ್ಲದೇ ಕಾಂಡ, ಗಿಣ್ಣು ಹಾಗೂ ತೆನೆಗಳ ಮೇಲೂ ಕಂದು ಬಣ್ಣದ ಮಚ್ಚೆಯಂತೆ ಕಾಣಿಸಿಕೊಳ್ಳುತ್ತವೆ. ಹೂವು ಹಾಗೂ ತೆನೆಗೆ ಬರುವ ಸಮಯದಲ್ಲಿ ತೆನೆಯ ಬುಡಭಾಗದಲ್ಲಿ ಹಸಿರು ಅಥವಾ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತದೆ. ಕಾಳುಕಟ್ಟುವ ಮೊದಲೇ ತೆನೆಯ ಬುಡಭಾಗಕ್ಕೆ ಈ ರೋಗ ಭಾದಿಸಿದರೆ ಬಹಳಷ್ಟ ನಷ್ಟವಾಗುವುದು. ಕಾಳು ಕಟ್ಟಿದ ನಂತರ ರೋಗ ತಗುಲಿದರೆ ಕಾಳು ಸದೃಢವಾಗುವುದಿಲ್ಲ ಎಂದು ಬಳಗಾನೂರು ಗ್ರಾಮದ ರೈತರೊಬ್ಬರು ಹೇಳುತ್ತಾರೆ.
10 ಎಕರೆಗೆ ತಗುಲಿದ ಬೆಂಕಿ ರೋಗ, ಗೌಡನಬಾವಿ ರೈತರೊಬ್ಬರ ಅಳಲು !
“ಪೂರಾ ಹತ್ತು ಎಕರೆ ತುಂಬಾ ಈ ಹಾಳಾದ್ದು ಬೆಂಕಿ ರೋಗ ಹಬ್ಬೆöÊತ್ರಿ ನೋಡ್ರಿ. ಮೊನ್ನೆ ಮೊನ್ನೆ ಹಚ್ಚೀವಿ. ಎಲ್ಲಾ ಸಸಿಗುಳು ಸುಟ್ಟಂಗ ಆಗ್ಯಾವ. ಏನ್ ಮಾಡಬಕು ಅನೋದೆ ತಿಳಿವಲ್ತು. ಎರಡನೇ ಬೆಳೀಗೆ ನೀರು ಅದ್ಯಾವ ಅಂತಾ ಎಲ್ಲಾ ಬಡಾ ಬಡ ಕೆಲ್ಸಾ ಮಾಡಿ, ಒಂದೂವರೆ ರ‍್ಡು ಲಕ್ಷ ಖರ್ಚು ಮಾಡಿ ಗದ್ದಾö್ಯಗ ಸಸಿ ನಾಟಿ ಮಾಡಿದ್ರ ಇಂತ ಪರಿಸ್ಥಿತಿ ಆಗೇತಿ. ಹಚ್ಚಿ ಹದಿನೈದು ದಿನದಾಗ ಹಿಂಗಾದ್ರ ಬೆಳಿ ಎದ್ದೇಳದು ಕಷ್ಟ. ಖರ್ಚು ಮಾಡಿದ್ದೆಲ್ಲಾ ಹೊಳ್ಯಾಗ ಹುಂಚೆಣ್ಣು ತೊಳದಂಗಾಗೈತಿ” ಎಂದು ಗೌಡನಬಾವಿ ಗ್ರಾಮದ ಹೊಳಿಯಪ್ಪ ಕುರುಬರ ಅಳಲು ತೋಡಿಕೊಂಡಿದ್ದಾರೆ.
ಮಾಹಿತಿ ನೀಡಲು ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯ : ಆರೋಪ
ತಮ್ಮ ಗದ್ದೆಯಲ್ಲಿ ಬೆಳೆ ಬೆಂಕಿ ರೋಗಕ್ಕೆ ತುತ್ತಾಗಿ ತಾಲೂಕಿನ ಹಲವು ಗ್ರಾಮಗಳ ರೈತರು ರೋಗ ಹತೋಟಿಗಾಗಿ ಇನ್ನಿಲ್ಲದ ತಾಪತ್ರಯ ಅನುಭವಿಸುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಸಂಕಷ್ಟಕ್ಕೀಡಾದ ರೈತರಿಗೆ ಸಲಹೆ-ಸೂಚನೆ ನೀಡಲು ನಿರ್ಲಕ್ಷö್ಯ ವಹಿಸಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಉಳಿಸಿಕೊಳ್ಳುವ ಭರದಲ್ಲಿ ಯರ‍್ಯಾರೋ ನೀಡಿದ ಸಲಹೆಗಳನ್ನು ಅನುಸರಿಸುತ್ತಿದ್ದು, ಮತ್ತಷ್ಟು ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಈ ಕುರಿತು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ಈ ರೋಗಕ್ಕೆ ಕಾರಣ ಏನು ? ಪರಿಹಾರ ಏನು ? ಎನ್ನುವ ನಿಟ್ಟಿನಲ್ಲಿ ರಾಯಚೂರು ಕೃಷಿ ವಿಜ್ಞಾನಿಗಳೊಂದಿಗೆ ರೈತರ ಹೊಲಕ್ಕೆ ಭೇಟಿ ನೀಡಿ ರೋಗ ಹತೋಟಿಗೆ ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಬೇಕು. ಇಲ್ಲದೇ ಹೋದರೆ ರೋಗ ಹೆಚ್ಚೆಚ್ಚು ಆವರಿಸಿದಂತೆ ಬಹಳಷ್ಟು ರೈತರು ತೊಂದರೆಗೀಡಾಗಲಿದ್ದಾರೆ ಎಂದು ಅವಳಿ ತಾಲೂಕಿನ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.