ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 31
ನಗರದ ರಸ್ತೆ ಬದಿಗಳಲ್ಲಿ ಡಬ್ಬಾ ಅಂಗಡಿ, ಶೆಡ್‌ಗಳನ್ನು ತೆರವುಗೊಳಿಸಿದ್ದರಿಂದ ಸಾವಿರಾರು ಸಣ್ಣಪುಟ್ಟ ವ್ಯಾಪಾರಸ್ಥರು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ತಹಸಿಲ್ ಕಾರ್ಯಾಲಯದ ಮುಂದೆ ಮಂಗಳವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು.
ಬೀದಿ ಬದಿ ವ್ಯಾಪಾರ ಮಾಡಿಕೊಂಡು ಕಳೆದ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೆವು. ಏಕಾಏಕಿ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ದೈನಂದಿನ ಜೀವನ ನಡೆಸಲು ಕಷ್ಟಕರವಾಗಿದೆ. ಅಂದಂದಿನ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದ ನಮಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಬುಧವಾರದಿಂದ ಇಲ್ಲಿಯವರೆಗೂ ಕೈಯಲ್ಲಿ ಕೆಲಸವಿಲ್ಲದೇ, ಜೀವನ ನಿರ್ವಹಣೆಗೆ ಆದಾಯವಿಲ್ಲದೇ ಮುಂದೇನು ಎಂಬ ಆತಂಕದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಸತ್ಯಾಗ್ರಹ ನಿರತ ಬೀದಿ ಬದಿ ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಹೋರಾಟ ತೀವ್ರ: ನಾಗರಾಜ್ ಪೂಜಾರ್ ಎಚ್ಚರಿಕೆ
ಸತ್ಯಾಗ್ರಹ ನಿರತರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ನಾಗರಾಜ್ ಪೂಜಾರ್, ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದರಿಂದ ನಗರದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಜಿಲ್ಲಾ, ತಾಲೂಕು ಹಾಗೂ ನಗರಸಭೆ ಆಡಳಿತ ಮುನ್ನೆಚ್ಚರಿಕೆವಹಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ್ದೇ ಇದಕ್ಕೆ ಕಾರಣ. ಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ, ಆದರೆ ಪ್ರಭಾವಿಗಳ ಕಟ್ಟಡ, ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಆದೇಶ ಪಾಲಿಸದೇ ಇರುವುದು ಯಾಕೆ ? ಹಾಗಾದರೆ ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯವೇ ? ಎಂದು ಪ್ರಶ್ನಿಸಿದರು.
ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಹಲವು ಮಾರ್ಗದರ್ಶಿಗಳನ್ನು ನೀಡಿದೆ ಆದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಅವುಗಳನ್ನು ಪಾಲಿಸಿಲ್ಲ. ಇದರಿಂದ ರಸ್ತೆ ಬದಿ ವ್ಯಾಪಾರವನ್ನೇ ಜೀವನ ನಿರ್ವಹಣೆಗೆ ಆಧರಿಸಿದ್ದ ಕುಟುಂಬಗಳು ಬೀದಿಪಾಲಾಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ಬಡವರ ಹೊಟ್ಟೆಯ ಮೇಲೆ ಹೊಡೆಯದೇ ಈ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಪೂಜಾರ್ ಎಚ್ಚರಿಸಿದರು.
ಮೊದಲ ದಿನ ಐದಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಉಪವಾಸ ಸತ್ಯಾಗ್ರಹ
ಮೊದಲ ದಿನವಾದ ಇಂದು ಖಾಸಿಮ್ ಸಾಬ್ ಕಾರ್ಪೆಂಟರ್, ಶರಣೇಗೌಡ, ಯಾಕೂಬ್ ಎತ್ಮಾರಿ, ರಮೇಶ್ ಬದಾಮಿ, ಸಾದಿಕ್ ಮೆಕಾನಿಕ್ ಸೇರಿದಂತೆ ಇನ್ನಿತರೆ ವ್ಯಾಪಾರಸ್ಥರು ಸರದಿ ಉಪವಾಸ ಆರಂಭಿಸಿದರು. ಹೋರಾಟ ಸಮಿತಿಯ ಸಂಚಾಲಕರಾದ ಡಿ.ಎಚ್.ಪೂಜಾರ್, ವೆಂಕನಗೌಡ ಗದ್ರಟಗಿ, ಬಸವರಾಜ ಬಾದರ್ಲಿ, ಬಿ.ಎನ್.ಯರದಿಹಾಳ, ಅಮಿನ್‌ಸಾಬ್ ನದಾಫ್, ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸತ್ಯಾಗ್ರಹದಲ್ಲಿ ಡಾ ವಸಿಂ ಅಹ್ಮದ್, ರಹೀಮ್ ಸಾಬ್ ಮೆಕಾನಿಕ್, ಚಂದ್ರಶೇಖರ ಗೊರೆಬಾಳ, ಕರೇಗೌಡ ಕುರುಕುಂದಿ, ಹುಸೇನ್ ಸಾಬ್, ನಿರುಪಾದೆಪ್ಪ ಗುಡಿಹಾಳ, ಭಗತ್‌ಸಿಂಗ್ ಆಟೊ ಚಾಲಕರ ಸಂಘದ ಬಸವರಾಜ ಕೊಂಡೆ, ಸಮ್ಮದ್ ಚೌದ್ರಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ದಾವಲ್‌ಸಾಬ್ ದೊಡ್ಡಮನಿ, ಸೇರಿದಂತೆ ನೂರಾರು ಬೀದಿ ಬದಿ ವ್ಯಾಪಾಸ್ಥರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಆರೋಗ್ಯ ತಪಾಸಣೆ
ಮೊದಲ ದಿನ ಐದಕ್ಕೂ ಹೆಚ್ಚು ಜನ ಬೀದಿ ವ್ಯಾಪಾರಸ್ಥರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರಿAದ ಸರ್ಕಾರಿ ಆಸ್ಪತ್ರೆಯ ವೈದ್ಯ ಸಿಬ್ಬಂದಿಯವರು ವ್ಯಾಪಾರಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಮಧ್ಯಾಹ್ನದಿಂದಲೇ ಆಂಬುಲೆನ್ಸ್ನ್ನು ಸತ್ಯಾಗ್ರಹ ನಿರತ ಸ್ಥಳದ ಬಳಿ ನಿಯೋಜಿಸಿದ್ದು ಕಂಡುಬಂತು.