ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 22
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು, ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನ ಮಾಡಿರುವುದನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಿಸೆಂಬರ್ 26ರಂದು ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಒಕ್ಕೂಟದ ಸಭೆಯಲ್ಲಿ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಅಂದು ನಗರದ ಗಣೇಶ ಗುಡಿಯಿಂದ ಬಸ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗದ ರಸ್ತೆ, ಗಾಂಧಿ ಸರ್ಕಲ್ ಮೂಲಕ ಪ್ರತಿಭಟನಾ ಮೆರವಣಿಗೆ ತಹಸೀಲ್ ಕಾರ್ಯಾಲಯ ತಲುಪಲಿದೆ. ಪ್ರತಿಭಟನೆಯಲ್ಲಿ ವಿವಿಧ ಜನಪರ ಸಂಘಟನೆಗಳು, ದಲಿತ-ದಮನಿತ, ಶೋಷಿತ ಸಮುದಾಯದ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಾಜ್ ಪೂಜಾರ್ ಅವರು, “ಅಮಿತ್ ಷಾ ಅಂಬೇಡ್ಕರ್ ಅವರ ಕುರಿತು ಹೀಯಾಳಿಕೆಯ ಮಾತನಾಡಿರುವುದು ಬಿಜೆಪಿಯ ಮನುವಾದದ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದಿಟ್ಟುಕೊAಡು, ದೇಶದ ದಲಿತ-ದಮನಿತ ಸಮುದಾಯಗಳು, ಕಾರ್ಮಿಕರು, ರೈತರು, ವಿದ್ಯಾರ್ಥಿ ಯುವಜನರು ಹಾಗೂ ಬಿಜೆಪಿಯ ಜನದ್ರೋಹಿ ಕಾಯ್ದೆ, ಕಾನೂನುಗಳನ್ನು ವಿರೋಧಿಸುತ್ತಿರುವುದರಿಂದ ಹತಾಶೆಗೊಂಡಿರುವ ಗೃಹ ಸಚಿವ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ದೇಶದ ದಲಿತ-ದಮನಿತ ಸಮುದಾಯಗಳಿಗೆ ನಿಜವಾದ ಬೆಳಕು ಬಾಬಾ ಸಾಹೇಬರು, ಅವರೇ ನಮ್ಮೆಲ್ಲರ ಪಾಲಿನ ದೈವ. ಏಳು ಜನ್ಮಗಳ ಸ್ವರ್ಗಕ್ಕಾಗಿ ಅಮಿತ್ ಶಾ ಅವರು ತಾವಂದುಕೊAಡAತೆ ದಿನವೂ ಜಪ ಮಾಡಲಿ. ಸಂವಿಧಾನ ಅಡಿ ಪ್ರಮಾಣ ವಚನ ಸ್ವೀಕರಿಸಿ, ಸಂವಿಧಾನ ನಿರ್ಮಾತೃ ಬಗ್ಗೆ ಅವಹೇಳನ ಮಾಡಿರುವ ಷಾ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ದಲಿತ ಸಂಘಟನೆಗಳ ಮುಖಂಡರಾದ ಅಶೋಕ ನಂಜಲದಿನ್ನಿ, ಮಂಜುನಾಥ ಗಾಂಧಿನಗರ, ಮೌಲಪ್ಪ ಮಾಡಸಿರವಾರ, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಚಲುವಾದಿ ಮಹಾಸಭಾದ ಶರಣಬಸವ ಮಲ್ಕಾಪುರ ಅವರು ಮಾತನಾಡಿ, “ಡಾ.ಬಾಬಾ ಸಾಹೇಬ್ ಅವರ ಬಗ್ಗೆ ಹದ್ದು ಮೀರಿ ಮಾತನಾಡಿರುವ ಅಮಿತ್ ಷಾ ಅವರು ಬಿಜೆಪಿಯವರಿಗೆ ಅಂಬೇಡ್ಕರ್ ಅವರ ಬಗ್ಗೆ ಇರುವ ನೈಜ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೋದಿಯವರು ಈ ಕೂಡಲೇ ಷಾ ಅವರನ್ನು ಸಂಪುಟದಿAದ ಕೈಬಿಡಬೇಕು” ಆಗ್ರಹಿಸಿದರು.
ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಮಣ್ಣ ಹಿರೇಬೇರಿಗಿ, ಅರುಣಕುಮಾರ್ ಬೆರಿಗಿ, ಶಂಕರ ಗುರಿಕಾರ, ಕೆಆರ್‌ಎಸ್‌ನ ಬಿ.ಎನ್.ಯರದಿಹಾಳ, ಲಿಯಾಖತ್ ಅಹಮದ್, ಖಾಜಿ ಜಾವಿದ್, ಕೆವಿಎಸ್‌ನ ಚಾಂದ್ ಪಾಷಾ ಟೇಲರ್, ಚಿದಾನಂದಪ್ಪ ವಕೀಲರು, ಬಸವರಾಜ ಎಕ್ಕಿ, ಅಬ್ದುಲ್ ಸಮದ್ ಚೌದ್ರಿ, ಬಸವಕೇಂದ್ರದ ಕರೇಗೌಡ ಕುರುಕುಂದಾ, ವೀರಭದ್ರಗೌಡ ಅಮರಾಪುರ, ಶರಣಪ್ಪ ಟೆಂಗಿನಕಾಯಿ, ಜಮಾಅತೆ ಇಸ್ಲಾಮಿ ಇಂದ್‌ನ ಹುಸೇನ್ ಸಾಬ್, ಡಾ.ವಸಿಮ್ ಅಹಮದ್, ಚಂದ್ರಶೇಖರ್ ಗೊರಬಾಳ, ತಾಯಪ್ಪ, ಬಸವರಾಜ ಬಾದರ್ಲಿ, ಕೃಷ್ಣಮೂರ್ತಿ ಧುಮತಿ, ಬಸವರಾಜ ಹಳ್ಳಿ, ಬಸವರಾಜ ಎಕ್ಕಿ ಸೇರಿದಂತೆ ಇನ್ನಿತರರಿದ್ದರು.