ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 13
2024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸಿಂಧನೂರು ನಗರಕ್ಕೆ ದಿನಾಂಕ: 24-10-2024ರಂದು ಮಂಜೂರಾಗಿರುವ 100 ವಿದ್ಯಾರ್ಥಿನಿಯರ ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಆರಂಭ ದಿನಾಂಕ ಮತ್ತೆ ಮುಂದೂಡಿರುವುದು ತಿಳಿದುಬಂದಿದೆ.
ಹಾಸ್ಟೆಲ್ ಆರಂಭಿಸುವ ನಿಟ್ಟಿನಲ್ಲಿ ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ಕಟ್ಟಡ ಅಂತಿಮಗೊಳಿಸಲಾಗಿದ್ದು, ಡಿ.11 ಇಲ್ಲವೇ 12ರಂದು ಉದ್ಘಾಟಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ನಿಧನದ ಹಿನ್ನೆಲೆಯಲ್ಲಿ ದಿನಾಂಕ ಮುಂದೂಡಲಾಗಿದೆ ಎಂದು ಗೊತ್ತಾಗಿದೆ. ರಾಜ್ಯದಾದ್ಯಂತ 150 ಹಾಸ್ಟೆಲ್ಗಳನ್ನು ದಿನಾಂಕ: 17-12-2024ರಂದು ಸಿಎಂ ಸಿದ್ದರಾಮಯ್ಯ ಅವರು ವರ್ಚುವಲ್ ಸಭೆಯ ಮೂಲಕ ಆನ್ಲೈನ್ನಲ್ಲಿ ಉದ್ಘಾಟಿಸುತ್ತಿರುವ ಬಗ್ಗೆ ತಿಳಿದುಬಂದಿದ್ದು, ಅಂದು ಸಿಂಧನೂರು ಹಾಸ್ಟೆಲ್ ಉದ್ಘಾಟನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಸ್ಟೆಲ್ ಸೌಕರ್ಯಕ್ಕಾಗಿ ಅರ್ಜಿ ಹಾಕಿರುವ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳು ದಿನವೂ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದು, ಆದಷ್ಟು ಬೇಗ ಹಾಸ್ಟೆಲ್ ಉದ್ಘಾಟಿಸಿ ಅನುಕೂಲ ಕಲ್ಪಿಸಬೇಕೆಂಬುದು ವಿದ್ಯಾರ್ಥಿ ಪಾಲಕರ ಆಗ್ರಹವಾಗಿದೆ