ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 12
ನಗರದ ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150ಎ ವ್ಯಾಪ್ತಿಯಲ್ಲಿ ಬರುವ ಸಣ್ಣ ಸಂಪರ್ಕ ಸೇತುವೆಗಳ (ಬ್ರಿಡ್ಜ್) ನಿರ್ಮಾಣಕ್ಕೆ ಅಸ್ತು ನೀಡಲಾಗಿದ್ದು, ಆರಂಭಿಕ ಕೆಲಸ ಕಳೆದ ಎರಡ್ಮೂರು ದಿನಗಳಿಂದ ನಡೆದಿದೆ. ಹೆದ್ದಾರಿ ವ್ಯಾಪ್ತಿಯ ಎರಡೂ ಬದಿಗಳ ಸೇತುವೆ ಆಜು-ಬಾಜು ಇರುವ ಮುಳ್ಳುಕಂಟಿ, ಕಸ ಹಾಗೂ ತ್ಯಾಜ್ಯವನ್ನು ಹಿಟಾಚಿ ಮೂಲಕ ವಿಲೇವಾರಿ ಮಾಡಲಾಗುತ್ತಿದೆ.
7 ಸಂಪರ್ಕ ಸೇತುವೆಗಳ ನಿರ್ಮಾಣ
ಹೆದ್ದಾರಿ ವ್ಯಾಪ್ತಿಯಲ್ಲಿ ಬಹಳಷ್ಟು ಸೇತುವೆಗಳಿದ್ದು, ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿರುವ 7 ಸೇತುವೆಗಳನ್ನು ಗುರುತಿಸಲಾಗಿದ್ದು, ಈ ಸೇತುವೆಗಳನ್ನು ತೆರವುಗೊಳಿಸಿ ಹೊಸದಾಗಿ ಸೇತುವೆ ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೆದ್ದಾರಿ ಮಾರ್ಗದಲ್ಲಿ ಹಲವು ಸೇತುವೆಗಳು ಬಿರುಕುಬಿಟ್ಟು, ಕೆಲವೊಂದು ಸೇತುವೆಗಳು ತಡೆಗೋಡೆಗಳು ಸಂಪೂರ್ಣ ಕುಸಿದುಬಿದ್ದಿರುವುದರಿಂದ ಅಪಘಾತಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ಸೇತುವೆಗಳ ದುರಸ್ತಿಗೆ ಕಳೆದ ಎರಡ್ಮೂರು ವರ್ಷಗಳಿಂದ ನಿರಂತರ ಒತ್ತಾಯಿಸುತ್ತ ಬಂದಿದ್ದರು. ಕೊನೆಗೂ ಸರ್ಕಾರ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಆದಷ್ಟು ಬೇಗ ಸೇತುವೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆನ್ನುವುದು ನಾಗರಿಕರ ಒತ್ತಾಯವಾಗಿದೆ.