ನಮ್ಮ ಸಿಂಧನೂರು, ಡಿಸೆಂಬರ್ 11
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ದಿನಾಂಕ: 10.12.2024ರಿಂದ 12.12.2024ರವರೆಗೆ ಶೋಕಾಚರಣೆ ಘೋಷಿಸಿದೆ. ಈ ನಡುವೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಿಗೆ ದಿನಾಂಕ: 11-12-2024ರಂದು ಸಾರ್ವತ್ರಿಕ ರಜೆ ಘೋಷಿಸಿದರೂ, ಸಿಂಧನೂರು ನಗರದ ಕೆಲ ಖಾಸಗಿ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸಲಾಗಿದೆ ಎನ್ನುವ ಬಗ್ಗೆ ಆರೋಪಗಳು ಕೇಳಿಬಂದಿವೆ. ರಜೆಯಿದ್ದರೂ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಒತ್ತಡಪೂರ್ವಕವಾಗಿ ಕಾಲೇಜಿಗೆ ಹಾಜರಾಗಬೇಕಾಗಿ ಬಂದಿದೆ. ಕೆಲ ಉಪನ್ಯಾಸಕರು ಮನಸ್ಸಿಲ್ಲದಿದ್ದರೂ ಅರೆ ಮನಸ್ಸಿನಿಂದ ಕಾಲೇಜು ತರಗತಿಗೆ ಹಾಜರಾಗಿದ್ದಾರೆಂದು ತಿಳಿದುಬಂದಿದೆ. ಸರ್ಕಾರ ಸುತ್ತೋಲೆ ಹೊರಡಿಸಿ ರಜೆ ಘೋಷಿಸಿದ್ದರೂ ಸರ್ಕಾರದ ಆದೇಶಕ್ಕೂ ಕೆಲ ಸಂಸ್ಥೆಗಳು ಮಾನ್ಯತೆ ಕೊಡದಿರುವುದು ಎಷ್ಟು ಸರಿ ? ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ ? ಅಥವಾ ಈ ಶಿಕ್ಷಣ ಸಂಸ್ಥೆಗಳಿಗೆಂದೇ ಪ್ರತ್ಯೇಕ ನಿಯಮಗಳೇನಾದರೂ ಇವೆಯೇ ? ಎನ್ನುವ ಕುರಿತು ವಿದ್ಯಾರ್ಥಿ ಪಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.