ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 03
ಪೆಂಜಲ್ ಸೈಕ್ಲೋನ್ ಪರಿಣಾಮದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದ್ದ ಆಗಾಗ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಭತ್ತ ಕಟಾವು ಮಾಡಿದ ರೈತರು ರಾಸಿ ರಕ್ಷಣೆ ಮಾಡಲು ಪರದಾಡುತ್ತಿದ್ದರೆ, ಇನ್ನೂ ಕೆಲ ರೈತರು ನೆಲಕ್ಕೊರಗಿದ ಫಸಲು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಸದ್ಯ ಶೇ.30ರಷ್ಟು ಭತ್ತ ಕೊಯ್ಲು ಮುಗಿದಿದ್ದು, ಇನ್ನೂ ಶೇ.70ರಷ್ಟು ಕೊಯ್ಲು ಬಾಕಿ ಇರುವುದರಿಂದ ರೈತರು ಆತಂಕಿತರಾಗಿದ್ದಾರೆ.
ನೆಲಕ್ಕೊರಗಿದ ಭತ್ತ
ತಾಲೂಕಿನ ಹಾರಾಪುರ, ಎಲೆಕೂಡ್ಲಿಗಿ, ಬಸಾಪುರ.ಇ.ಜೆ, ಕುನಟಗಿ, ಕಲ್ಲೂರು, ಮುಳ್ಳೂರು, ಪಗಡದಿನ್ನಿ, ಕೋಳಬಾಳ, ಕಣ್ಣೂರು, ಭೂತಲದಿನ್ನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಹಾಗೂ ಕ್ಯಾಂಪ್ ವ್ಯಾಪ್ತಿಯ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬಿ2, ಆರ್ಎನ್ಆರ್ ಸೇರಿದಂತೆ ಇನ್ನಿತರೆ ತಳಿಯ ಭತ್ತದ ಬೆಳೆ ಗಾಳಿ ಮಳೆಗೆ ನೆಲಕ್ಕೊರಗಿದೆ. ಆಗಾಗ ಮೇಲಿಂದ ಮೇಲೆ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ರೈತರು ನಷ್ಟ ಭೀತಿ ಎದುರಿಸುತ್ತಿದ್ದಾರೆ.
ಎಕರೆಗೆ 5ರಿಂದ 8 ಚೀಲ ನಷ್ಟ ಅಂದಾಜು
“ತೂಫಾನ್ನಿಂದಾಗಿ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಆಗಾಗ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಈ ಬಾರಿ ಡ್ಯಾಂ ತುಂಬಿ ಸರಿಯಾದ ಸಮಯಕ್ಕೆ ಕಾಲುವೆ ನೀರು ಬಂದಿದ್ದರಿಂದ ಒಳ್ಳೆಯ ಬೆಳೆ ತೆಗೆಯಬಹುದು ಎಂದು ಅಂದುಕೊಂಡಿದ್ದೆವು. ಆದರೆ, ಸೈಕ್ಲೋನ್ ಎಫೆಕ್ಟ್ನಿಂದಾಗಿ ಭತ್ತ ನೆಲಕ್ಕೆ ಬಿದ್ದು, ಎಕರೆಗೆ 5ರಿಂದ 8 ಚೀಲದವರೆಗೂ ನಷ್ಟ ಆಗುವ ಅಂದಾಜಿದೆ. ಒಂದುವೇಳೆ ಜೋರು ಮಳೆಬಂದರಂತೂ ಇನ್ನೂ ಜಾಸ್ತಿ ನಷ್ಟ ಆಗಲಿದೆ” ಎಂದು ಕುನ್ನಟಗಿ ಗ್ರಾಮದ ರೈತ ಅಕ್ಬರ್ ಅವರು ಅಳಲು ತೋಡಿಕೊಂಡಿದ್ದಾರೆ.
‘ಭತ್ತ ಕಟಾವಿಗೆ ಮಷಿನ್ ಸಿಗ್ತಿಲ್ಲ’
ಜಿಟಿ ಜಿಟಿ ಮಳೆ ಉದುರುತ್ತಿರುವುದರಿಂದ ಭತ್ತ ಕಟಾವು ಮಷಿನ್ಗಳಿಗೆ ಭಾರಿ ಬೇಡಿಕೆಯಿದ್ದು ಸುಲಭವಾಗಿ ಸಿಗುತ್ತಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಬೇರೆ ರಾಜ್ಯಗಳಿಂದ ಕಡಿಮೆ ಮಷಿನ್ಗಳು ಬಂದಿರುವುದರಿಂದ ಕೊರತೆ ಹೆಚ್ಚಿದೆ. ಎಕರೆ ಭತ್ತವನ್ನು 1 ತಾಸಿಗೆ ಕಟಾವು ಮಾಡುತ್ತಿದ್ದ ಮಷಿನ್ಗಳು, ಭತ್ತದ ನೆಲಕ್ಕೊರಗಿದ ಪರಿಣಾಮ 2ರಿಂದ ಎರಡೂವರೆ ತಾಸು ಸಮಯ ತೆಗೆದುಕೊಳ್ಳುತ್ತಿವೆ. ಕಟಾವಿಗೆ 1 ತಾಸಿಗೆ 2300 ರೂಪಾಯಿ ದರ ನಿಗದಿಗೊಳಿಸಲಾಗಿದ್ದು, ಎಕರೆ ಭತ್ತ ಕೊಯ್ಲು ಮಾಡಲು 4600 ವ್ಯಯಿಸುವಂತಾಗಿದೆ. ‘ಉಳ್ಳಾಗಡ್ಡಿ ಲಾಭ, ರವದಿಯಲ್ಲಿ ಹೋಯಿತು’ ಎನ್ನುವ ಸ್ಥಿತಿ ರೈತರದ್ದಾಗಿದೆ ಎಂದು ಬಸಾಪುರ.ಇ.ಜೆ ಗ್ರಾಮದ ರೈತರೊಬ್ಬರು ಹೇಳುತ್ತಾರೆ.
‘ಶೇ.70ರಷ್ಟು ಭತ್ತ ಕಟಾವು ಬಾಕಿ ಇದೆ’
ತಾಲೂಕು ವ್ಯಾಪ್ತಿಯಲ್ಲಿ ಇನ್ನೂ ಶೇ.70ರಷ್ಟು ಭತ್ತ ಕೊಯ್ಲು ಬಾಕಿ ಇದೆ. ಮಳೆಯ ಕಾರಣ ಕೆಲವರು ಕಟಾವಿಗೆ ಹಿಂದೇಟು ಹಾಕಿದರೆ, ಇನ್ನೂ ಕೆಲವರು ಮಷಿನ್ ಸಿಗದ ಕಾರಣ ಕೊಯ್ಲು ಮಾಡುವುದು ನಿಲ್ಲಿಸಿದ್ದಾರೆ. ಕೆಲ ಜಮೀನುಗಳಲ್ಲಿ ಇನ್ನೂ ಹಸಿ ಇದ್ದು, ಭತ್ತ ಕಟಾವು ಮಷಿನ್ಗಳ ಚಕ್ರಗಳು ಹುದುಲಿನಲ್ಲಿ ಸಿಲುಕುವುದರಿಂದ, ನೆಲ ಹಾರಲು ಬಿಟ್ಟಿದ್ದಾರೆ. ಬಹುತೇಕ ರೈತರ ಜಮೀನುಗಳಲ್ಲಿ ಭತ್ತ ನೆಲಕ್ಕೊರಗಿರುವುದರಿಂದ ಕಣವಿಸುತ್ತಲೂ ಇರುವ ಭತ್ತವನ್ನು ಕೂಲಿಕಾರರಿಂದ ಕೊಯ್ಲು ಮಾಡಿಸುತ್ತಿದ್ದು, ಕಟಾವಿಗೆ ಅನುಕೂಲ ಮಾಡುತ್ತಿದ್ದಾರೆ. ಸೈಕ್ಲೋನ್ ಪರಿಣಾಮ, ಮಷಿನ್ಗಳ ಕೊರತೆ, ಕೂಲಿಕಾರರ ಅಭಾವದಿಂದಾಗಿ ಕೊಯ್ಲು ನಿಧಾನಗತಿಯಲ್ಲಿ ಸಾಗಿದೆ.
ರಾಶಿ ರಕ್ಷಣೆಗೆ ರೈತರ ಹರಸಾಹಸ
ಕಳೆದ ಎರಡು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದು, ಭತ್ತ ಕಟಾವು ಮಾಡಿದ ರೈತರು ಹೊಲ, ಮನೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ರಾಶಿಯನ್ನು ಹಾಕಿದ್ದು, ತಾಡಪಾಲ್ಗಳಿಂದ ಮುಚ್ಚಿದ್ದಾರೆ. ಕೆಲವೆಡೆ ಜೋರು ಮಳೆಯಾಗಿದ ರೈತರ ರಾಶಿಗೆ ನುಗ್ಗಿದ್ದು, ಬೆಳಿಗ್ಗೆಯಿಂದಲೇ ಭತ್ತ ಒಣಗಿಸಲು ರೈತರು ಮುಂದಾಗಿದ್ದು, ಮಂಗಳವಾರ ಕಂಡುಬಂತು. ಬಸಾಪುರ.ಇ.ಜೆ, ಪಗಡದಿನ್ನಿಕ್ಯಾಂಪ್, ಕುನಟಗಿ, ಹಾರಾಪುರ, ಬೂತಲದಿನ್ನಿ, ಮಲ್ಲಾಪುರ, ಮುಳ್ಳೂರು.ಇ.ಜೆ ಹಾಗೂ ಕಲ್ಲೂರು ಗ್ರಾಮಗಳಲ್ಲಿ ರೈತರು ತಾಡಪಾಲ್ಗಳಿಂದ ರಾಶಿಯನ್ನು ಮುಚ್ಚಿಟ್ಟಿದ್ದಾರೆ. ಆಗಾಗ ಕ್ಷಣಕಾಲ ಬಿಸಿಲು ಬೀಳುವುದು, ಬಿಸಿಲು ಬೀಳುತ್ತಿದ್ದಂತೆ ಪುನಃ ಜಿಟಿ ಜಿಟಿ ಮಳೆ ಶುರುವಿಟ್ಟುಕೊಳ್ಳುತ್ತಿದ್ದು, ರೈತರಿಗೆ ರಾಶಿ ರಕ್ಷಣೆ ಮಾಡುವುದೇ ಕೆಲಸವಾಗಿದೆ. “ಮೇಲಿಂದ ಮೇಲೆ ಜಿಟಿ ಜಿಟಿ ಮಳೆ ಬರುತ್ತಿರುವುದರಿಂದ ರಾಶಿ ಮೇಲೆ ಮುಚ್ಚಿದ ತಾಡಪಾಲ್ ಮೇಲೆ ನೀರು ನಿಲ್ಲುತ್ತಿವೆ. ನಿಂತ ನೀರನ್ನು ಬಕೆಟ್ನಲ್ಲಿ ಸಂಗ್ರಹಿಸಿ ಚೆಲ್ಲುತ್ತಿದ್ದೇವೆ. ಜೋರು ಮಳೆಯಾದರೆ ರಾಶಿ ರಕ್ಷಣೆ ಮಾಡಿಕೊಳ್ಳುವುದು ಕಷ್ಟ. ದೊಡ್ಡ ರಾಶಿ ಮುಚ್ಚಲು ಹೆಚ್ಚಿನ ತಾಡಪಾಲ್ಗಳ ಬೇಕಿರುವುದರಿಂದ, ದಿನಕ್ಕೆ 20 ರೂಪಾಯಿಯಂತೆ ಬಾಡಿಗೆ ತಂದು ತಾಡಪಾಲ್ನಿಂದ ರಾಶಿ ಮುಚ್ಚುತ್ತಿದ್ದೇವೆ. ರಾತ್ರಿ ವೇಳೆ ವಿಪರೀತ ಮೋಡ ಕವಿಯುವುದರಿಂದ ಎಲ್ಲಿ ದೊಡ್ಡ ಮಳೆಯಾಗುತ್ತದೋ ಎಂಬ ಭಯ ಇದೆ” ಎಂದು ಕುನ್ನಟಗಿ ಕ್ಯಾಂಪ್ನ ರೈತ ಲೋಕಪ್ಪ ಹೇಳುತ್ತಾರೆ.