ಸಿಂಧನೂರು: ಹದಿನೈದು ದಿನಗಳಿಂದ ಸರ್ಕಾರಿ ಆಸ್ಪತ್ರೆ ಹೆರಿಗೆ ವಿಭಾಗ ಬಂದ್, ಗರ್ಭಿಣಿಯರ ಪರದಾಟ !

Spread the love

* ಮೂವರು ಮಹಿಳೆಯರ ಸರಣಿ ಸಾವಿನ ಪ್ರಕರಣ
* ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ ಪಟ್ಟು
* ಆಸ್ಪತ್ರೆಯ ಆಡಳಿತ ಹಾದಿ ತಪ್ಪಿದರೂ ಹೊರಳಿ ನೋಡದ ಶಾಸಕರು !
* ಎಮ್ಮೆಲ್ಸಿ ಪದೇ ಪದೆ ಭೇಟಿ ನೀಡಿದರೂ ಸುಧಾರಿಸಿದ ಆಸ್ಪತ್ರೆ ಆಡಳಿತ
* ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಚಕಾರವೆತ್ತದ ಬಿಜೆಪಿ, ಜೆಡಿಎಸ್ ಮುಖಂಡರು
* ಜಿಲ್ಲಾ, ತಾಲೂಕು ಆಡಳಿತ ನಿರ್ಲಕ್ಷ್ಯ ಆರೋಪ
ವಿಶೇಷ ವರದಿ: ಬಸವರಾಜ ಹಳ್ಳಿ
ಸಿಂಧನೂರು ನವೆಂಬರ್ 27

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಮಹಿಳೆಯರ ಹೆರಿಗೆ ವಿಭಾಗ ಬಂದ್ ಆಗಿದ್ದು, ಬಡ ಮಹಿಳೆಯರು ಹಾಗೂ ಅವರ ಸಂಬಂಧಿಗಳು ಹೆರಿಗಾಗಿ ಪರಿತಪಿಸುತ್ತಿದ್ದಾರೆ. ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯರು ರಜೆ ಹಾಕಿದ್ದರಿಂದ ಬಾಣಂತಿಯರಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದಂತೆ ಶಸ್ತçಚಿಕಿತ್ಸೆ ನಡೆಯುತ್ತಿಲ್ಲ.
ಅಕ್ಟೋಬರ್ ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮೂವರು ಮಹಿಳೆಯರು ಅಸ್ವಸ್ಥಗೊಂಡು ರಾಯಚೂರಿನ ರಿಮ್ಸ್‌ನಲ್ಲಿ ಮೃತಪಟ್ಟ ಪ್ರಕರಣಗಳು ವಿವಾದದ ಸ್ವರೂಪ ಪಡೆದುಕೊಂಡಿವೆ. ಮಹಿಳೆಯರ ಸರಣಿ ಸಾವಿನ ಅನುಮಾನಾಸ್ಪದ ಪ್ರಕರಣಗಳನ್ನು ತನಿಖೆಗೊಳಪಡಿಸಿ, ಕಾರಣ ಪತ್ತೆಹಚ್ಚಿ ನಿರ್ಲಕ್ಷ್ಯವಹಿಸಿದ ವೈದ್ಯರು, ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಿ, ಕನ್ನಡಪರ ಸಂಘಟನೆಗಳು ತಹಸಿಲ್ ಕಾರ್ಯಾಲಯದ ಮುಂದೆ ಹೋರಾಟ ನಡೆಸಿದ ಬೆನ್ನಲ್ಲೇ, ಹಲವು ವೈದ್ಯರು ದಿಢೀರ್ ಕರ್ತವ್ಯಕ್ಕೆ ರಜೆ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ನೀಡುವಲ್ಲಿ ಏರುಪೇರಾಗಿದ್ದು, ಅದರಲ್ಲೂ ಹೆರಿಗೆ ವಿಭಾಗ ಸಂಪೂರ್ಣ ಬಂದ್ ಆಗಿದೆ ಎಂದು ಹೇಳಲಾಗುತ್ತಿದೆ.
“ಕಾರಟಗಿಗೆ ಹೋಗಿ ಡೆಲಿವರಿ ಮಾಡಿಸಿಕೆಂಡು ಬಂದೀವ್ರಿ”
“ಡೆಲಿವರಿಗಂತ ಮೊನ್ನೆ ಸರ್ಕಾರಿ ದವಾಖಾನಿಗೆ ಹೆಣಮಗಳನ್ನ ಕರಕಂಡು ಬಂದಿದ್ವಿ ರೀ. ಎದ್ಕ ಏನೋ ಹೆರಿಗೆ ಸೆಕ್ಷನ್ನು ಬಂದ್ ಆಗೈತಿ ಅಂತ ಹೇಳಿದ್ರು. ಹಿಂಗಾಗಿ ಬೇರೆಯವರ ಸಹಾಯ ಪಡೆದು ಇಲ್ಲಿಂದ ನಾವು ಕಾರಟಗಿ ಸರ್ಕಾರಿ ಆಸ್ಪತ್ರೆಗೋಗಿ ಡೆಲಿವರಿ ಮಾಡಿಸಿಕೆಂಡು ಬಂದೀವಿ. ಇಲ್ಲೇ ದೊಡ್ಡ ಊರಾಗ ಆಸ್ಪತ್ರೆ ಇಟಕಂಡು, ಸಣ್ಣ ಊರಿಗೆ ಹೋಗಿ ಹೆರಿಗೆ ಮಾಡಿಸೆಕೆಂಡು ಬರಂಗಾತಿ ನೋಡ್ರಿ” ಎಂದು ಹೆರಿಗೆಯಾದ ಮಹಿಳೆಯೊಬ್ಬರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

Namma Sindhanuru Click For Breaking & Local News
ಸಿಂಧನೂರು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಪ್ಲಾಂಟ್‌ನ ಸಾಮಗ್ರಿಗಳಿಗೆ ಧೂಳು ಹಿಡಿದಿರುವುದು.

“ತಿಂಗಳಿಗೆ ಅಂದಾಜು 250ರಿಂದ 300 ಹೆರಿಗೆ”
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನವೂ 200ಕ್ಕೂ ಹೆಚ್ಚು ಮಹಿಳೆಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ತಿಂಗಳು ಅಂದಾಜು 250ರಿಂದ 300ಕ್ಕೂ ಹೆಚ್ಚು ಹೆರಿಗಳಾಗುತ್ತವೆ ಎಂದು ಹೇಳಲಾಗುತ್ತದೆ. ಹೆರಿಗೆ ವಿಭಾಗ ಬಂದ್ ಆಗಿರುವ ಕಾರಣ ಗರ್ಭಿಣಿಯರು ಖಾಸಗಿ ಆಸ್ಪತ್ರೆ ಇಲ್ಲವೇ ರಾಯಚೂರು, ಲಿಂಗಸುಗೂರು, ಮಾನ್ವಿ, ಕಾರಟಗಿ, ಕುಷ್ಟಗಿ, ತಾವರಗೇರಾ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಗೆ ತಕ್ಕಂತೆ ಅಗತ್ಯ ತಜ್ಞ ವೈದ್ಯ ಸಿಬ್ಬಂದಿ ಇಲ್ಲದ ಕಾರಣ ಗರ್ಭಿಣಿಯರು, ಬಾಣಂತಿಯರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆಸ್ಪತ್ರೆಗೆ ಬಂದ ರೋಗಿಗಳು ದೂರುತ್ತಾರೆ.

Namma Sindhanuru Click For Breaking & Local News
ಸಿಂಧನೂರು ಸರ್ಕಾರಿ ಆಸ್ಪತ್ರೆಯ ಕೌಂಟರ್‌ನಲ್ಲಿ ಚೀಟಿ ಮಾಡಿಸಲು ಸಾರ್ವಜನಿಕರು ಸರದಿ ಸಾಲಲ್ಲಿ ನಿಂತಿದ್ದು ಮಂಗಳವಾರ ಬೆಳಿಗ್ಗೆ ಕಂಡುಬಂತು.

ವೈದ್ಯರ ರಜೆ, ಚಿಕಿತ್ಸೆಗಾಗಿ ಬಳ್ಳಾರಿ, ರಾಯಚೂರು ಆಸ್ಪತ್ರೆಗೆ ಅಲೆದಾಟ !
ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬ ಪುರುಷ, ಒಬ್ಬ ಮಹಿಳಾ ಪ್ರಸೂತಿ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರು ತಜ್ಞ ವೈದ್ಯರು ಕಳೆದ ಹಲವು ದಿನಗಳಿಂದ ರಜೆ ಹಾಕಿರುವುದರಿಂದ ಹೆರಿಗೆ ವಿಭಾಗದಲ್ಲಿ ಅಯೋಮಯ ವಾತಾವರಣ ನಿರ್ಮಾಣವಾಗಿದೆ. ಗುತ್ತಿಗೆ ಆಧಾರದಲ್ಲಿ ಮತ್ತೊಬ್ಬ ಮಹಿಳಾ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಹೆರಿಗೆ ಕೇಸ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ನಿರ್ವಹಿಸಲು ಆಗುತ್ತಿಲ್ಲ. ಸಾಮಾನ್ಯ ಹೆರಿಗೆಯನ್ನಷ್ಟೇ ನಿರ್ವಹಿಸಿ, ಶಸ್ತç ಚಿಕಿತ್ಸೆ ಇಲ್ಲವೇ ಗಂಭೀರ ಸಮಸ್ಯೆಗಳಿದ್ದಲ್ಲಿ ರೋಗಿಯ ಕಡೆಯವರಿಗೆ ಅಥವಾ ಹೆರಿಗೆಗಾಗಿ ಕರೆತಂದ ಮಹಿಳೆಯರ ಕಡೆಯವರಿಗೆ ರಾಯಚೂರಿನ ರಿಮ್ಸ್ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೋಗುವಂತೆ ಹೇಳಿ, ಅಲ್ಲಿಗೆ ಶಿಫಾರಸು ಮಾಡಿ ಕಳುಹಿಸಲಾಗುತ್ತಿದೆ. ನಗರದಲ್ಲಿ ತಾಲೂಕು ಆಸ್ಪತ್ರೆ ಇದ್ದರೂ ಮಹಿಳೆಯರ ಪಾಲಿಗೆ ಇಲ್ಲದಂತಾಗಿದೆ ಎಂದು ನಾಗರಿಕರು ಆರೋಪಿಸುತ್ತಾರೆ.

Namma Sindhanuru Click For Breaking & Local News
ಸಿಂಧನೂರು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಪ್ಲಾಂಟ್‌ನಲ್ಲಿ ಉಪಕರಣಗಳನ್ನು ಸಂಗ್ರಹಿಸಿಟ್ಟಿರುವುದು.

ನುರಿತ ಸಿಬ್ಬಂದಿ ಕೊರತೆ, ಉಪಕರಣಗಳ ಅಭಾವ ಐಸಿಯುನಲ್ಲಿ ಮುಂದುವರಿದ ಅವ್ಯವಸ್ಥೆ ?
ಆಸ್ಪತ್ರೆಯ ಐಸಿಯುನಲ್ಲಿ ಎಸಿ (ಏರ್ ಕಂಡೀಷನರ್) ಸಂಪೂರ್ಣ ಸ್ಥಗಿತಗೊಂಡಿದೆ. ಅರ್ಹತೆ ಹೊಂದಿದ ಸಿಬ್ಬಂದಿ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಮೊತ್ತದ ಕೆಲ ಯಂತ್ರೋಪಕರಣಗಳು ಉಪಯೋಗಕ್ಕಿಲ್ಲದಂತಾಗಿವೆ. ಸದ್ಯ ಐಸಿಯುನಲ್ಲಿ 15 ಬೆಡ್‌ಗಳಿವೆ. ವಿವಿಧ ವಿಭಾಗಗಳ ರೋಗಿಗಳು ಹಾಗೂಶಸ್ತ್ರ ಚಿಕಿತ್ಸೆಗೆ ಒಳಗಾದವರನ್ನು (ಆಪರೇಷನ್) ಒಂದೇ ವಿಭಾಗದಲ್ಲಿ ದಾಖಲಿಸುತ್ತಿರುವುದರಿಂದ ಸೋಂಕು (ವೈರಲ್ ಇನ್‌ಪೆಕ್ಷನ್) ಉಂಟಾಗುತ್ತಿದೆ. ವಿಭಾಗವಾರು (ಸಪರೇಟ್) ವಾರ್ಡ್‌ಗಳನ್ನು ಇಲ್ಲಿಯವರೆಗೂ ಮಾಡದೇ ಇರುವುದರಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳು ಆರೋಪಿಸುತ್ತಾರೆ.
20ರಿಂದ 30 ಸಿಬ್ಬಂದಿ ಕೊರತೆ
ತಾಲೂಕು ಆಸ್ಪತ್ರೆಯಲ್ಲಿ 20ರಿಂದ 30 ಸಿಬ್ಬಂದಿ ಕೊರತೆ ಇರುವುದರಿಂದ ಮೂಲ ಕೆಲಸಕ್ಕೆ ನಿಯುಕ್ತಿಗೊಂಡ ಸಿಬ್ಬಂದಿ ಅನ್ಯ ಕೆಲಸ ಮಾಡುತ್ತಿದ್ದಾರೆ. ಎಲೆಕ್ಟ್ರಿಷಿಯನ್ ಸಿಬ್ಬಂದಿ ಚೀಟಿ ಮಾಡುವುದು, ಚೀಟಿ ಮಾಡುವವರು ಬೇರೆ ಕೆಲಸಕ್ಕೆ ನಿಯೋಜನೆ, ಕೆಲ ಸ್ಟಾಪ್ ನರ್ಸ್ಗಳನ್ನು ಮೂಲ ಕೆಲಸಕ್ಕೆ ನಿಯೋಜಿಸದೇ ಬೇರೆ ಕೆಲಸಕ್ಕೆ ಹಚ್ಚಿರುವುದು, ಎಸ್‌ಡಿಎ ಸಿಬ್ಬಂದಿಗಳು ಅನ್ಯ ಕೆಲಸದಲ್ಲಿ ತೊಡಗುವುದು ಹೀಗೆ ಹಲವು ಉದ್ಯೋಗಿಗಳು ಬೇರೆ ಬೇರೆ ಕೆಲಸವನ್ನು ಮಾಡುತ್ತಿದ್ದಾರೆ. ಇದು ರೋಗಿಗಳ ಚಿಕಿತ್ಸೆಗೆ ತೊಡಕಾಗಿ ಪರಿಣಮಿಸಿದೆ. ಆಸ್ಪತ್ರೆಯಲ್ಲಿ ಅನಧಿಕೃತ ಕೆಲಸಗಾರರ ಹಾವಳಿ ಹೆಚ್ಚಿದೆ. ಅನಧಿಕೃತ ಕೆಲಸಗಾರರಿಂದ ಯಾವುದೇ ರೀತಿಯ ಸಮಸ್ಯೆಗಳಾದರೆ ಹೊಣೆ ಯಾರು ? ಎಂದು ಸಾರ್ವಜನಿಕರು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ.
2 ಕೋಟಿ ರೂಪಾಯಿ ವೆಚ್ಚದ ಆಕ್ಸಿಜನ್ ಪ್ಲಾಂಟ್‌ಗೆ ಧೂಳು
ಕೋವಿಡ್ ಸಂದರ್ಭದಲ್ಲಿ 2 ಕೋಟಿ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಪ್ಲಾಂಟ್ ಇಂದಿಗೂ ಕಾರ್ಯನಿರ್ವಹಿಸುತ್ತಿಲ್ಲ. ಆಕ್ಸಿನ್ ಕೊಠಡಿಯಲ್ಲಿ ಸಾಮಗ್ರಿಗಳು ಧೂಳು ತಿನ್ನುತ್ತಿದ್ದರೂ ಇತ್ತ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿರುಗಿ ನೋಡಿಲ್ಲ. ಹಾಗಾದರೆ ಇಷ್ಟು ಹಣ ಖರ್ಚು ಮಾಡಿಯೂ ಆಕ್ಸಿಜನ್ ಪ್ಲಾಂಟ್ ಬಳಕೆಗೆ ಮುಂದಾಗದೇ ಇರುವುದು ಯಾವ ಕಾರಣಕ್ಕೆ ? ಎಂಬುದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಬಹಿರಂಗಪಡಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಎಆರ್‌ಎಸ್, ಎವಿಆರ್‌ಕೆ ಹಣ ದುರ್ಬಳಕೆ ಆರೋಪ
ಎಆರ್‌ಎಸ್, ಎವಿಆರ್‌ಕೆ ಹಣ ಅಸಮರ್ಪಕ ಬಳಕೆ, ಜೆಎಸ್‌ವೈ ಸೇರಿ ಅಂಬುಲೆನ್ಸ್ ಸೇವೆಯಲ್ಲಿ ಜನರಿಂದ ಹಣ ವಸೂಲಿ, ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರದಿಂದ (ಕೊಠಡಿ ದುರಸ್ತಿ, ನವೀಕರಣ ಇತ್ಯಾದಿ..) ಬಿಡುಗಡೆಯಾದ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ.
‘ಉಚಿತ ಔಷಧಿ ವಿತರಣೆಯಾಗುತ್ತಿಲ್ಲ’
ಒಳರೋಗಿಗಳಿಗೆ ಮತ್ತು ಹೊರ ರೋಗಿಗಳಿಗೆ ಸಮರ್ಪಕವಾಗಿ ಔಷಧಿ ವಿತರಣೆಯಾಗುತ್ತಿಲ್ಲ, ಐಸಿಯು ವಾರ್ಡ್ಗಳಲ್ಲಿ ನುರಿತ, ಅರ್ಹತೆ ಹೊಂದಿದ ಸಿಬ್ಬಂದಿ ಇಲ್ಲ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ನಡುವಿನ ಗುಂಪುಗಾರಿಕೆ ಮಿತಿ ಮೀರಿ, ಹಾದಿ-ಬೀದಿರಂಪವಾಗುವ ಹಂತಕ್ಕೆ ಹೋಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ಒದಗಿಸುವಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸಂಘಟನೆಯ ಮುಖ್ಯಸ್ಥರೊಬ್ಬರು ಹೇಳುತ್ತಾರೆ.
ಯಂತ್ರೋಪಕರಣಗಳ ಕೊರತೆ
ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಕೊರತೆ, ಥೈರಾಯಿಡ್ ಮಷಿನ್ ಇಲ್ಲ, ಕೆಲ ಟೆಸ್ಟಿಂಗ್ ಯಂತ್ರೋಪಕರಣಗಳ ಅಭಾವ, ಎಕ್ಸರೇ ರಿಪೋರ್ಟ್ ಪ್ರತಿ, ರೋಗಿಗಳ ಕೈಗೆ ದೊರೆಯದಿರುವುದು, ರಾತ್ರಿ ವೇಳೆ ಔಷಧಾಲಯ (ಫಾರ್ಮಸಿ) ಬೇಗನೆ ಮುಚ್ಚುವುದು ಸೇರಿದಂತೆ ಹಲವು ಲೋಪಗಳಿಂದ ರೋಗಿಗಳು ಸಮಸ್ಯೆಗೀಡಾಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಶೌಚಾಲಯ, ವಾರ್ಡ್, ಒಳಾವರಣ ಸ್ವಚ್ಛತೆಗೆ ನಿರ್ಲಕ್ಷ್ಯ
ಸರ್ಕಾರಿ ಆಸ್ಪತ್ರೆಗೆ ದಿನವೂ ಸಾವಿರಾರು ಜನರು ಆಗಮಿಸುವುದರಿಂದ ಸ್ವಚ್ಛತೆ ಕೈಗೊಳ್ಳುವುದು ಸವಾಲಿನ ಕೆಲಸವಾಗಿದ್ದು, ಆದರೂ ನಿಗದಿಯಂತೆ ಯೋಜನಾಬದ್ಧವಾಗಿ ಸ್ವಚ್ಛತೆ ಕೈಗೊಳ್ಳಬೇಕಿದೆ. ಆದರೆ ಆಸ್ಪತ್ರೆಯಲ್ಲಿ ವಾರ್ಡ್‌ಗಳು, ಶೌಚಾಲಯ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಸ್ವಚ್ಛತೆ ಅಷ್ಟಕಷ್ಟೇ ಎನ್ನುವಂತಾಗಿದೆ.
ಸರ್ಕಾರಿ ವೈದ್ಯರ ಖಾಸಗಿ ‘ಸೇವೆ’ ??
ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಕ್ಲಿನಿಕ್ಕು ನಡೆಸಲು ಸರ್ಕಾರ ಕೆಲವೊಂದು ನಿಬಂಧನೆಗಳನ್ನೇನೋ ವಿಧಿಸಿದೆ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿರುವುದಕ್ಕಿಂತ ಹೆಚ್ಚು ಸಮಯವನ್ನು ಖಾಸಗಿ ಆಸ್ಪತ್ರೆಯಲ್ಲಿ ಕಳೆಯುತ್ತಾರೆ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ, ಉಳಿದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ಕು ನಡೆಸಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಆಸ್ಪತ್ರೆಯಲ್ಲಿ ಇವರು ಯಾವಾಗ ಇರುತ್ತಾರೋ, ಯಾವಾಗ ಬರುತ್ತಾರೋ ಎಂದು ಗಂಟೆಗಟ್ಟಲೇ ಕಾಯಬೇಕಿದೆ. ಇನ್ನೂ ಕೆಲ ವೈದ್ಯರು, ಹೆಸರಿಗಷ್ಟೇ ಇದ್ದು, ಕರ್ತವ್ಯಕ್ಕೆ ಹಾಜರಾಗುವುದನ್ನು ದುರ್ಬೀನು ಹಾಕಿ ಹುಡುಕಬೇಕು. ಸರ್ಕಾರಿ ಆಸ್ಪತ್ರೆಯ ಸೇವೆಯ ಬಗ್ಗೆ ಇಷ್ಟೊಂದು ತಾತ್ಸಾರವಿದ್ದರೆ ಹೇಗೆ ? ಎಂದು ರೋಗಿಯ ಕಡೆಯವರೊಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಹೆಸರಿಗಷ್ಟೇ 100 ಹಾಸಿಗೆ ಆಸ್ಪತ್ರೆ !!
ನಗರದ 100 ಹಾಸಿಗೆಯ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತವಾಗಿ ಇರಬೇಕಾದ ಕ್ಯಾಸುವಲ್ಟಿ (ಅಪಘಾತ), ಎಮೆರ್ಜೆನ್ಸಿ (ತುರ್ತು ಚಿಕಿತ್ಸೆ), ಸಪರೇಟ್ ಜನರಲ್ ವಾರ್ಡ್, ಪೋಸ್ಟ್ ಆಪರೇಟಿವ್ ವಾರ್ಡ್, ಜನರಲ್ ಸರ್ಜರಿ ವಾರ್ಡ್, ಐಸಿಯು, ಮಕ್ಕಳ ವಾರ್ಡ್ (ಜನರಲ್), ಎನ್‌ಐಸಿಯು ವಾರ್ಡ್ಗಳನ್ನು ಸಪರೇಟ್ ಆಗಿ ನಿರ್ವಹಣೆ ಮಾಡದೇ ಒಂದೇ ವಾರ್ಡ್ನಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡುತ್ತಿರುವುದರಿಂದ ರೋಗಿಗಳು ಹುಷಾರು ತಪ್ಪುತ್ತಿದ್ದಾರೆ ಈ ಆಸ್ಪತ್ರೆಯಲ್ಲಿ 4 ವೆಂಟಿಲೇಟರ್ ವ್ಯವಸ್ಥೆ ಇದೆ ಹೇಳುತ್ತಾರೆ, ಆದರೆ ನುರಿತ ಸಿಬ್ಬಂದಿ ಇಲ್ಲದ ಕಾರಣ ಇವುಗಳು ಹಲವು ದಿನಗಳಿಂದ ನಿರುಪಯುಕ್ತವಾಗಿವೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು.
ಹೆರಿಗೆ ನಂತರ ಮಹಿಳೆಯರ ಸರಣಿ ಸಾವಿನ ಪ್ರಕರಣ
ಸಿಂಧನೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಮಹಿಳೆ ಮೌಸಂಬಿ ಮಂಡಲ್ ಗಂಡ ಮಹೇಶ್ವರ ಮಂಡಲ್, ಉದ್ಬಾಳ.ಜೆ ಗ್ರಾಮದ ಗರ್ಭಿಣಿ ಚಂದ್ರಕಲಾ, ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ರೇಣುಕಮ್ಮ ಗಂಡ ಬಸವರಾಜ ಅವರು ಹೆರಿಗೆಯಾದ ನಂತರ ಅಸ್ವಸ್ಥಗೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಆದರೆ, ಮೃತ ಮೂವರು ಮಹಿಳೆಯರ ನವಜಾತ ಶಿಶುಗಳು ತಾಯಿಯನ್ನು ಕಳೆದುಕೊಂಡ ಅನಾಥವಾಗಿವೆ. ಅಕ್ಟೋಬರ್ ತಿಂಗಳಲ್ಲಿ ಮಹಿಳೆಯರ ಸರಣಿ ಸಾವಿನ ಘಟನೆಗಳು ಘಟಿಸಿದ್ದರಿಂದ, ಮೃತ ಕುಟುಂಬದವರು ಹಾಗೂ ನಮ್ಮ ಕರ್ನಾಟಕ ಸೇನೆಯ ವತಿಯಿಂದ ತಹಸಿಲ್ ಕಾರ್ಯಾಲಯದ ಮುಂದೆ ದಿನಾಂಕ: 8-11-2024ರಿಂದ 11-11-2024ರವರೆಗೆ ನಾಲ್ಕು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದನ್ನು ಸ್ಮರಿಸಬಹುದು.
ಸರ್ಕಾರಿ ಆಸ್ಪತ್ರೆ ಬಗ್ಗೆ ಬಿಜೆಪಿ, ಜೆಡಿಎಸ್ ಮೌನ !
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡು ಮೂವರು ಮಹಿಳೆಯರು ರಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾದ ಸರಣಿ ಪ್ರಕರಣಗಳು ಹಲವು ದಿನಗಳಿಂದ ಸದ್ದು ಮಾಡುತ್ತಿದ್ದರೂ, ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಬಿಜೆಪಿ ಮತ್ತು ಜೆಡಿಎಸ್‌ನ ಮುಂಚೂಣಿ ಮುಖಂಡರು ಮೌನಕ್ಕೆ ಶರಣರಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಗುಮಾನಿಗಳಿಗೆ ಆಸ್ಪದ ಕಲ್ಪಿಸಿದೆ. “ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ಮುಖಂಡರು ಕೆಲ ದಿನಗಳ ಹಿಂದೆ ಒಗ್ಗೂಡಿ ದಸರಾ ಮಹೋತ್ಸವ ಆಚರಿಸಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಸಾರಿದ್ದರು. ಅದರಂತೆ ಸರ್ಕಾರಿ ಆಸ್ಪತ್ರೆಯ ಹುಳುಕುಗಳನ್ನು ಸರಿಪಡಿಸಲು ಯಾಕೆ ಮುಂದಾಗುತ್ತಿಲ್ಲ” ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸುತ್ತಾರೆ.
ಜಿಲ್ಲಾ, ತಾಲೂಕು ಆಡಳಿತ ನಿರ್ಲಕ್ಷ್ಯ ಆರೋಪ
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಸರಿಯಾಗಿ ಚಿಕಿತ್ಸೆ ದೊರೆಯದಿರುವುದು, ಹೆರಿಗೆಯಾದ ನಂತರ ಮೂವರು ಮಹಿಳೆಯರ ಸರಣಿ ಸಾವಿನ ಪ್ರಕರಣ, ಆಸ್ಪತ್ರೆಯ ವೈದ್ಯರು ಖಾಸಗಿ ಕ್ಲಿನಿಕ್ಕು ನಡೆಸುತ್ತಿರುವುದು, ಸಿಬ್ಬಂದಿ ಕೊರತೆ, ಯಂತ್ರೋಪಕರಣಗಳ ಅಭಾವ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಹಲವು ದಿನಗಳಿಂದ ಧ್ವನಿ ಎತ್ತಿದರೂ ಹಾಗೂ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಹೆರಿಗೆ ವಿಭಾಗ ಬಂದ್‌ ಆಗಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತ ಆಸ್ಪತ್ರೆ ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ ಎಂದು ನಾಗರಿಕರು ಸೇರಿದಂತೆ ವಿವಿಧ ಸಂಘಟನೆಗಳು ಆರೋಪಿಸಿವೆ.


Spread the love

Leave a Reply

Your email address will not be published. Required fields are marked *