ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 22
ತುಂಗಭದ್ರಾ ಜಲಾಶಯದಿಂದ ಹಿಂಗಾರು ಹಂಗಾಮು ಮತ್ತು ಕುಡಿಯಲು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮಾರ್ಚ್ 31, 2024ರವರೆಗೆ ನೀರು ಹರಿಸಲು ಗುರುವಾರ ಬೆಂಗಳೂರಿನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ 122ನೇ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ. 1ರಿಂದ 15ರ ವರೆಗೆ 1500 ಕ್ಯುಸೆಕ್, 16ರಿಂದ 31ರ ವರೆಗೆ 2000 ಕ್ಯೂಸೆಕ್ನಂತೆ, ಜ.1ರಿಂದ ಮಾ.31ರ ವರೆಗೆ 3800 ಕ್ಯುಸೆಕ್ನಂತೆ ನೀರು ಹರಿಯಲಿದೆ. ಕುಡಿಯುವ ನೀರಿಗಾಗಿ ಏ.1ರಿಂದ 10ರ ವರೆಗೆ ನಿತ್ಯ 1650 ಕ್ಯೂಸೆಕ್ ಎಡದಂಡೆ ವಿಜಯನಗರ ಕಾಲುವೆಗೆ ಏ.11ರಿಂದ ಮೇ 10ರ ತನಕ 150 ಕ್ಯುಸೆಕ್ ನಂತೆ ವಿತರಣಾ ಕಾಲುವೆ ಒಂದರಿAದ 11 ಎ ವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದರ ಪ್ರಕಾರ ನೀರು ಹರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಈ ನಡುವೆ ಬಲದಂಡೆ ಕಾಲುವೆಗೂ ನೀರು ನಿಗದಿಗೊಳಿಸಿ ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಭೋಸರಾಜು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್, ಕಾಡಾ ಅಧ್ಯಕ್ಷ ಹಸನ್ಸಾಬ್ ದೋಟಿಹಾಳ, ಶಾಸಕರಾದ ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಶಿವರಾಜ್ ಪಾಟೀಲ್, ಬಿ.ಎಂ.ನಾಗರಾಜ್ ಸಿರುಗುಪ್ಪ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಶರಣಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ ಸೇರಿದಂತೆ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ರೈತ ಸಂಘಟನೆಗಳ ಮುಖಂಡರು, ರೈತರು ಇದ್ದರು.