ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 8
ನಗರದ ರಾಮ ಕಿಶೋರ ಕಾಲೋನಿಯ ವರಸಿದ್ಧಿ ವಿನಾಯಕ ಗುಡಿ ಸಮೀಪದ ಚರಂಡಿ ತುಂಬಿ ತುಳುಕಿ ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಯೋವೃದ್ಧರು ಜಾರಿ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಸಣ್ಣಪುಟ್ಟ ವಾಹನ ಹೋಗುತ್ತಿದ್ದಂತೆ ರಸ್ತೆ ಆಜುಬಾಜು ಹೋಗುವವರಿಗೆ ಕೊಚ್ಚೆ ಸಿಡಿಯುತ್ತಿದ್ದು, ಜನರು ‘ಗುಡ್ಡ ಸುತ್ತಿ ಮೈಲಾರಕ್ಕೆ ಹೋಗುವಂತೆ’ ಈ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಸಂಚರಿಸುವಂತಾಗಿದೆ. ಇನ್ನು ವೃದ್ಧರು, ವಿಕಲಚೇತನರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಕಿರಿಕಿರಿ ಅನುಭವಿಸುತ್ತಿದ್ದಾರೆ.
‘ಎಲೆಕ್ಷನ್‌ಗೆ ಸೀಮಿತಗೊಂಡ ವಾರ್ಡ್ ಸದಸ್ಯರು’
“ನಗರಸಭೆ ಚುನಾವಣೆ ಇದ್ದಾಗ, ಹಗಲು-ರಾತ್ರಿ ಓಡಾಡುವ ಅಭ್ಯರ್ಥಿಗಳು ಗೆದ್ದ ನಂತರ ವಾರ್ಡ್ ಜನರ ಸಮಸ್ಯೆಗಳನ್ನು ಸುತಾರಾಂ ಕೇಳುವುದಿಲ್ಲ. ಇಲ್ಲಿನ ಗಟಾರು ಸ್ವಚ್ಛ ಮಾಡಿ ಆರೇಳು ತಿಂಗಳಾದರೂ ಸ್ವಚ್ಛತೆಗೆ ಮುಂದಾಗಿಲ್ಲ. ವಾರ್ಡ್ನ ಜನರ ವೋಟು ಮಾತ್ರ ಇವರಿಗೆ ಬೇಕು. ಆದರೆ, ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾತ್ರ ನಿಷ್ಕಾಳಜಿ” ಎಂದು ರಾಮಕಿಶೋರ ಕಾಲೋನಿಯ ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.