ನಮ್ಮ ಸಿಂಧನೂರು, ನವೆಂಬರ್ 4
ಬಸವಕೇಂದ್ರದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಬಸವಾದಿ ಶರಣರ ತತ್ವ ಪ್ರಚಾರಕ ಪಿ. ವೀರಭದ್ರಪ್ಪ ಸಾಹುಕಾರ ಕುರುಕುಂದಿ ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರು ಮೂಲತಃ ತಾಲೂಕಿನ ಕುರುಕುಂದಿ ಗ್ರಾಮದವರಾದ ಇವರು ಕಳೆದ ಹಲವು ದಶಕಗಳಿಂದ ಸಿಂಧನೂರು ನಗರದಲ್ಲಿ ನೆಲೆಸಿದ್ದರು. ಬಸವಾದಿ ಶರಣರ ವಚನಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ಪಿ.ವೀರಭದ್ರಪ್ಪ ಅವರು, ಬಸವಾನುಯಾಯಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವಚನ ವಿಶ್ಲೇಷಣೆಯ ಕಾರಣದಿಂದಾಗಿ ನಾಡಿನ ಹಲವು ಮಠಾಧೀಶರೊಂದಿಗೂ ಉತ್ತಮವಾದ ಒಡನಾಟ ಹೊಂದಿದ್ದರು. ವಚನ ಮಾಂಗಲ್ಯದ ಮೂಲಕವು ಅವರು ಹೆಸರುವಾಸಿಯಾಗಿದ್ದರು. ಸಿಂಧನೂರಿನಲ್ಲಿ ಬಸವ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪನೆ ಹಾಗೂ ಬಸವೇಶ್ವರ ವೃತ್ತ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸ್ನೇಹಿತರೊಡಗೂಡಿ ಮನೆಯಲ್ಲಿ ಮಹಾ ಮನೆ ಕಾರ್ಯಕ್ರಮದ ಮೂಲಕ ಬಸವಾದಿ ಶರಣರ ತತ್ವಗಳನ್ನು ಮನೆ ಮನೆಗೆ ಬಿತ್ತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂದು ಅವರ ಒಡನಾಡಿಗಳು ಸ್ಮರಿಸುತ್ತಾರೆ. ಮೃತರ ಅಂತ್ಯಕ್ರಿಯೆ ಕುರುಕುಂದಿ ಗ್ರಾಮದಲ್ಲಿ 4-11-2024ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಪಿ.ವೀರಭದ್ರಪ್ಪ ಸಾಹುಕಾರ ಅವರ ನಿಧನಕ್ಕೆ ಹಲವು ಗಣ್ಯರು ಹಾಗೂ ಸಂಘ-ಸಂಸ್ಥೆಗಳು ಕಂಬನಿ ಮಿಡಿದಿವೆ.