ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 21
ನಗರದ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ರವಾನಿಸಲಾಯಿತು.
ನಗರದ ಪ್ರಮುಖ ರಸ್ತೆ ವ್ಯಾಪ್ತಿಯಲ್ಲಿ ದಶಕಗಳಿಗೂ ಮೇಲ್ಪಟ್ಟು ಸಾವಿರಾರು ಬೀದಿ ಬದಿ ವ್ಯಾಪಾರಸ್ಥರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಬೀದಿ ಬದಿ ವ್ಯಾಪಾರವೇ ಕುಟುಂಬಕ್ಕೆ ಆಧಾರವಾಗಿದೆ. ನಗರಸಭೆಯಿಂದ ಬಹಳಷ್ಟು ಜನರು ಲೈಸೆನ್ಸ್ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಅಂತವರ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವುದರಿಂದ ಅವರ ಕುಟುಂಬಗಳು ಬೀದಿಗೆ ಬರಲಿವೆ. ಇದೇ ವ್ಯಾಪಾರ ನಂಬಿಕೊAಡು ಹಲವು ವ್ಯಾಪಾರಸ್ಥರು ಬ್ಯಾಂಕ್ ಸೇರಿದಂತೆ ಹಲವು ಕಡೆ ಸಾಲ-ಸೋಲ ಮಾಡಿಕೊಂಡಿದ್ದು, ಅಂಗಡಿಗಳನ್ನು ಎತ್ತಂಗಡಿ ಮಾಡಿದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರತಿಭಟನಾ ನಿರತರು ಪೌರಾಯುಕ್ತರ ಗಮನ ಸೆಳೆದರು.
ಅಂಗಡಿಗಳ ತೆರವುಗೊಳಿಸುವ ನಿರ್ಧಾರವನ್ನು ನಗರಸಭೆಯವರು ಕೈಬಿಟ್ಟು, ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯವಾಗಿ ವ್ಯವಸ್ಥೆ ಮಾಡಿದ ನಂತರ ತೆರವುಗೊಳಿಸಲು ಸೂಚನೆ ನೀಡಬೇಕು. ಇಲ್ಲವಾದಲ್ಲಿ ನಗರಸಭೆ ಮುಂದೆ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ನಮ್ಮ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಮೆರವಣಿಗೆಯ ಮೂಲಕ ನಗರಸಭೆ ತೆರಳಿ ಪೌರಾಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಡಿಶ್ ಗಂಗಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ನಗರ ಘಟಕ ಅಧ್ಯಕ್ಷ ರಫೀ ಕುನ್ನಟಗಿ, ತಾಲೂಕು ಘಟಕದ ಅಧ್ಯಕ್ಷ ಲಕ್ಷö್ಮಣ ಭೋವಿ, ಉಪಾಧ್ಯಕ್ಷರಾದ ಬಾಷಾಸಾಬ, ರಾಜಾಸಾಬ್, ಬಸವರಾಜ ಟೇಲರ್, ಶಂಕ್ರಪ್ಪ ಭೋವಿ, ಮುಖಂಡರಾದ ಶರಣಪ್ಪ ಮಲ್ಲಾಪುರ, ಸೈಯ್ಯದ್ ಬಾಷಾ ಮಿಟ್ಟಿಮನಿ ಇನ್ನಿತರರು ಇದ್ದರು.