ಸಿಂಧನೂರು: ‘ಚಳವಳಿಗಳ ಒಡನಾಡಿ ಜಿ.ಎನ್.ಸಾಯಿಬಾಬಾ’

Spread the love

ನಮ್ಮ ಸಿಂಧನೂರು, ಅಕ್ಟೋಬರ್ 17
ದೇಶದ ಮುಂಚೂಣಿ ರಾಜಕೀಯ ವಿಶ್ಲೇಷಕರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಪ್ರೊ.ಜಿ.ಎನ್.ಸಾಯಿಬಾಬಾ ಅವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಹಲವು ಚಳವಳಿಗಳಿಗೆ ಜೀವತುಂಬಿದ್ದರು. ಅವರ ಅಗಲಿಕೆ ಎಲ್ಲ ಚಳವಳಿಗಾರರಿಗೆ ನೋವು ತಂದಿದೆ ಎಂದು ಉಪನ್ಯಾಸಕ ಚಂದ್ರಶೇಖರ ಗೊರಬಾಳ ಕಂಬನಿ ಮಿಡಿದರು.
ನಗರದ ಶ್ರಮಿಕ ಭವನದಲ್ಲಿ ಗೆಳೆಯರ ಬಳಗದಿಂದ ಬುಧವಾರ ಜಿ.ಎನ್.ಸಾಯಿಬಾಬಾ ಅವರ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಬಡ ಕುಟುಂಬದಿಂದ ಬಂದ ಸಾಯಿಬಾಬಾ ಅವರು ಎಂದೂ ತಮ್ಮ ದೈಹಿಕ ಸಮಸ್ಯೆಗೆ ಕೊರಗಿದವರಲ್ಲ, ಮರುಗಿದವರಲ್ಲ. ದೇಶದ ಜನರ ಬದುಕಿನ ಪ್ರಶ್ನೆಗಳ ಬಗ್ಗೆ ಸದಾ ಜೀವಂತಿಕೆಯಿಟ್ಟುಕೊಂಡು ಅವರ ಬಗ್ಗೆ ಪ್ರಭುತ್ವದ ಮುಂದೆ ಪ್ರಶ್ನೆ ಎತ್ತುತ್ತಿದ್ದರು. ಶಾಲಾ ಹಂತದಿAದಲೂ ಅತ್ಯಂತ ಪ್ರತಿಭಾವಂತ ವ್ಯಕ್ತಿಯಾದ ಅವರು ಅಪಾರ ವಿಧ್ವತ್ತು ಗಳಿಸಿದರೂ ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ದೇಶಕಂಡ ಪ್ರಮುಖ ವಿದ್ವಾಂಸರಲ್ಲಿ ಅವರೂ ಕೂಡ ಒಬ್ಬರು. ಕಮ್ಯುನಿಸ್ಟ್ ಪಕ್ಷಗಳು, ಚಳವಳಿಗಾರರು ಹಾಗೂ ಎಲ್ಲ ಜನಪರ ಚಿಂತಕರೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದ ಅವರು, ನಿರಂತರದ ಅಧ್ಯಯನಶೀಲತೆ ಮೂಲಕ ಅಪಾರ ಜ್ಞಾನ ಗಳಿಸಿದ್ದರು. ಸದಾ ಜನಪರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತ ಪ್ರಜಾಸತ್ತಾತ್ಮಕ ಹೋರಾಟಗಳ ದಿಕ್ಸೂಚಿಯಂತಿದ್ದ ಅವರನ್ನು ಪ್ರಭುತ್ವ ದುರುದ್ದೇಶದಿಂದ 9ಕ್ಕೂ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿಟ್ಟು ಅವರ ದನಿ ಅಡಗಿಸುವ ಕೆಲಸ ಮಾಡಿದ್ದು, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಖೇದ ವ್ಯಕ್ತಪಡಿಸಿದರು.
ಸಿಪಿಐ(ಎಂಎಲ್) ಮಾಸ್‌ಲೈನ್‌ನ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮಾತನಾಡಿ, ಜಿ.ಎನ್.ಸಾಯಿಬಾಬಾ ಅವರು ಪ್ರಮುಖ ಬುದ್ಧಿಜೀವಿಯಾಗಿದ್ದರು. ದೇಶದ ಜ್ವಲಂತ ಸಮಸ್ಯೆಗಳಿಗೆ ಪ್ರತಿಕ್ರಿಯಿಸುತ್ತ, ಪ್ರಭುತ್ವದ ಫ್ಯಾಸಿಸ್ಟ್ ನೀತಿಗಳು, ದೌರ್ಜನ್ಯ, ದಬ್ಬಾಳಿಕೆಯನ್ನು ಪ್ರಶ್ನಿಸುತ್ತಾ ಬಂದಿದ್ದರು. ಶೇ.90ರಷ್ಟು ಅಂಗವೈಕಲ್ಯತೆಯನ್ನು ಹೊಂದಿದ್ದರೂ ಬಿಜೆಪಿ ಸರ್ಕಾರ ಅವರನ್ನು ಜೈಲಿನಲ್ಲಿಟ್ಟು, ಅವರ ಧ್ವನಿಯೆನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ, ಸರ್ಕಾರದ ನೀತಿ, ನಿರೂಪಣೆಗಳನ್ನು ಪ್ರಶ್ನಿಸುವವರನ್ನು ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗಟ್ಟುವ ಕೆಲಸ ಮಾಡಲಾಗುತ್ತಿದೆ. ಅದರ ಭಾಗವಾಗಿ ಸಾಯಿಬಾಬಾ ಅವರನ್ನು ಕಾರಾಗೃಹಕ್ಕೆ ತಳ್ಳಲಾಯಿತು ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಸಂಘಟನೆಯ ಎಸ್.ದೇವೇಂದ್ರಗೌಡ, ಕೆಪಿಆರ್‌ಎಸ್‌ನ ಮುಖಂಡ ಬಸವಂತರಾಯಗೌಡ ಕಲ್ಲೂರು, ಎಂ.ಲಿAಗಪ್ಪ, ಡಿ.ಎಚ್.ಕಂಬಳಿ, ಬಸವರಾಜ ಬಾದರ್ಲಿ, ಬಿ.ಎನ್.ಯರದಿಹಾಳ, ಸಮ್ಮದ್‌ಚೌದ್ರಿ, ಕೃಷ್ಣಮೂರ್ತಿ, ಶಂಕರ ಗುರಿಕಾರ, ತಾಯಪ್ಪ, ರಾಜಶೇಖರ, ಹನುಮೇಶ ಗುಡದೂರು ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *