ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 05
ಸಿಂಧನೂರು ನೂತನ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ವರದಿ ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ನಗರದ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸಿಂಧನೂರು-ಕಲ್ಮಲಾ (78.45 ಕಿ.ಮೀ) ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸಿಂಧನೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾರಂಭ ಆರಂಭಗೊAಡು ಸಿಎಂ ಸಿದ್ದರಾಮಯ್ಯ ಅವರು ಮಾತು ಆರಂಭಿಸಿ ಸರ್ಕಾರದ ಸಾಧನೆಗಳನ್ನು ವಿವರಿಸಿ ಕೊನೆಯಲ್ಲಿ, ಮಾತು ಮುಗಿಸುವ ಮುನ್ನ ಜನಸಮೂಹದ ಗ್ಯಾಲರಿಯಿಂದ ಸಿಂಧನೂರು ಜಿಲ್ಲೆ ಮಾಡಿ ಎಂದು ಕೂಗು ಬರುತ್ತಿದ್ದಂತೆ “ಸುಮ್ನೇ ಇಲ್ದಿರೋದೆಲ್ಲಾ ಹೇಳ್ಬಿಟ್ರೆ ಮಾಡ್ಬೇಕಲ್ಲಪ್ಪಾ. ಅವೆಲ್ಲಾ ಮುಂದೆ ನೋಡೋಣ, ಇಲ್ಲಿ ಒಂದು ನನಗೆ ಮನವಿಪತ್ರ ಕೊಟ್ಟಿದ್ದಾರೆ. ಕೆಲವೊಂದು ದೋಷಗಳಿವೆ. ಅವನ್ನೆಲ್ಲಾ ಸರಿಪಡಿಸಿ ಅಂತ ಹೇಳಿದ್ದಾರೆ. ಆ ದೋಷಗಳನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ನಾನು ಹೇಳ್ಲಿಕ್ಕೆ ಬಯಸ್ತೀನಿ. ನೀವು ಹೇಳ್ತಿದ್ದಂತೆ ನಾನ್ ಮಾಡಕ್ಕಾಗಲ್ಲ. ರಿಪೋರ್ಟ್ ತರಿಸಿಕೊಂಡು ಪರಿಶೀಲನೆ ಮಾಡ್ತೇನೆ” ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ಜಿಲ್ಲಾ ರಚನೆಯ ಕೂಗು ಕೇಳುತ್ತಿದ್ದಂತೆ ಸಿಎಂ ಅವರ ಬಳಿ ಬಂದ ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಸಿದ್ದರಾಮಯ್ಯ ಅವರು ನಯವಾಗಿ ವೇದಿಕೆಯ ಮೇಲೆ ಕುಳಿತುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಂಪನಗೌಡ ಬಾದರ್ಲಿ ಅವರು ಸಿಎಂ ಅವರೊಂದಿಗೆ ಕಿವಿಯಲ್ಲಿ ಗುಟ್ಟಾಗಿ ಮಾತನಾಡಿದ್ದು ಗಮನ ಸೆಳೆಯಿತು.
ಜಿಲ್ಲೆಯ ಕನಸಿಗೆ ನೀರೆರದ ಭರವಸೆ
ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಕಾರ್ಯಕ್ರಮದಲ್ಲಿ ವರದಿ ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಹೇಳಿರುವುದು ಮುಂಬರುವ ದಿನಗಳಲ್ಲಿ ದಿನಗಳಲ್ಲಿ ಸಿಂಧನೂರು ಜಿಲ್ಲೆಯಾಗುವ ಲಕ್ಷಣವನ್ನು ಪರೋಕ್ಷವಾಗಿ ಬಿಂಬಿಸಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ.