ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 03
ಕಲ್ಯಾಣ ಕರ್ನಾಟಕದ ಭತ್ತದ ಕಣಜ, ಕೃಷಿ, ವ್ಯಾಪಾರ, ವಹಿವಾಟು ಕೇಂದ್ರವಾಗಿ, ಪ್ರಮುಖ ಜಿಲ್ಲೆಗಳಿಗೆ ‘ಜಂಕ್ಷನ್’ನಂತಿರುವ ಸಿಂಧನೂರನ್ನು ಸಿಎಂ ಸಿದ್ಧರಾಮಯ್ಯ ಅವರು ‘ದಸರಾ ಮಹೋತ್ಸವ’ ಸಂದರ್ಭದಲ್ಲಿ ನೂತನ ಜಿಲ್ಲೆಯಾಗಿ ಘೋಷಿಸುವವರೇ? ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಹು ಚರ್ಚಿತವಾಗುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಇತ್ತೀಚಿನ ಹಲವು ಘಟನಾವಳಿಗಳು ಮುನ್ಸೂಚನೆ ನೀಡುತ್ತಿವೆ.
ರಾಯಚೂರು, ಮಾನ್ವಿ ತಾಲೂಕು ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಚಾಲನೆಗೆ ಅಕ್ಟೋಬರ್ 4 ಮತ್ತು 5ರಂದು ಮುಖ್ಯಮಂತ್ರಿಯವರು ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಸಿಂಧನೂರನ್ನು ನೂತನ ಜಿಲ್ಲಾ ಕೇಂದ್ರವಾಗಿ ಘೋಷಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೊಂದು ಜಿಲ್ಲೆಯ ಉದಯಕ್ಕೆ ಹಸಿರು ನಿಶಾನೆ ತೋರಲಿದ್ದಾರೆಂದು ಸಾರ್ವಜನಿಕರೊಬ್ಬರು ಆಶಾಭಾವ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಜಿಲ್ಲಾ ಕೋರ್ಟ್ ಮಂಜೂರಾಗಿ, ಕಾರ್ಯನಿರ್ವಹಿಸುತ್ತಿದ್ದು, ಸಾರಿಗೆ, ಕೃಷಿ ಇಲಾಖೆಯ ವಿಭಾಗಗಳನ್ನು ಈಗಾಗಲೇ ರಾಜ್ಯ ಸರ್ಕಾರ ಲಿಂಗಸುಗೂರಿನಿಂದ ಸಿಂಧನೂರಿಗೆ ವರ್ಗಾಯಿಸಲು ಕ್ರಮ ಕೈಗೊಂಡಿದೆ. ಈ ನಡುವೆ ಆಧಾರ್ ಕಾರ್ಡ್ಗಳಲ್ಲಿ ಸಿಂಧನೂರು ಉಪ ವಿಭಾಗ ಎಂದು ಬರುತ್ತಿದ್ದು, ಹೀಗಾಗಿ ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸ್ಪಷ್ಟ ಮುನ್ಸೂಚನೆಗಳು ಕಂಡುಬರುತ್ತಿವೆ ಎನ್ನುವುದು ಸಾರ್ವಜನಿಕರೊಬ್ಬರ ಅಭಿಪ್ರಾಯವಾಗಿದೆ.
ದಸರಾ ಮಹೋತ್ಸವದಲ್ಲಿ ಜಿಲ್ಲಾ ಕೇಂದ್ರ ಘೋಷಿಸುವರೇ ?
ಅಕ್ಟೋಬರ್ 4 ರಿಂದ ಸಿಂಧನೂರಿನಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ದೊರೆಯಲಿದ್ದು, ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಂಧನೂರನ್ನು ನೂತನ ಜಿಲ್ಲೆಯಾಗಿ ಘೋಷಣೆ ಮಾಡಲಿದ್ದಾರೆನ್ನುವ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಶಾಸಕ ಹಂಪನಗೌಡ ಬಾದರ್ಲಿ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆಯೇ ಅವರು ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಧ್ವನಿ ಎತ್ತಿದ್ದರು. ಈ ನಡುವೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರೂ ಕೂಡ ಜಿಲ್ಲಾ ಕೇಂದ್ರದ ಬಗ್ಗೆ ಸರ್ಕಾರ ಮತ್ತು ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಅವರು ಹೊಸ ಜಿಲ್ಲೆಯನ್ನು ಘೋಷಿಸಿದರೂ ಘೋಷಿಸಬಹುದು ಎನ್ನುವ ಚರ್ಚೆಗಳು ಇವೆ.
ದಸರಾ ಗಿಫ್ಟ್ ನೀಡುವರೇ ?
ಕಳೆದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಂಧನೂರಿಗೆ ಯಾವೊಂದು ವಿಶೇಷ ಯೋಜನೆಗಳನ್ನು ನೀಡಿಲ್ಲ, ತಿಮ್ಮಾಪುರ ಏತ ನೀರಾವರಿ ಯೋಜನೆ ಮತ್ತು ನವಲಿ ಸಮಾನಾಂತರ ಜಲಾಶಯ ಯೋಜನೆ ಹೊರತುಪಡಿಸಿ ಇನ್ನೇನು ಘೋಷಿಸಿಲ್ಲ. ಈ ನಡುವೆ ಸಚಿವಾಕಾಂಕ್ಷಿಯಾಗಿದ್ದ ಹಂಪನಗೌಡ ಬಾದರ್ಲಿ ಅವರಿಗೆ ಸಚಿವಗಿರಿ ತಪ್ಪಿಹೋಗಿದ್ದು, ಈ ಎಲ್ಲ ಲೆಕ್ಕಾಚಾರಗಳೊಂದಿಗೆ ಬಹುದಿನದ ಬೇಡಿಕೆಯಾದ ಸಿಂಧನೂರು ಜಿಲ್ಲೆಯ ಈಡೇರಿಕೆಯನ್ನು ಈ ‘ದಸರಾ ಮಹೋತ್ಸವದಲ್ಲಿ’ ಘೋಷಿಸುವ ಮೂಲಕ ಗಿಫ್ಟ್ ನೀಡಲಿದ್ದಾರೆಯೇ ಎನ್ನುವ ಬಗ್ಗೆ ಸಾರ್ವಜನಿಕರು ಕುತೂಹಲಿಗಳಾಗಿದ್ದಾರೆ.
‘ಸಿಂಧನೂರು ಜಿಲ್ಲಾ ಕೇಂದ್ರದ ಸಾಮರ್ಥ್ಯ ಹೊಂದಿದೆ’
ಸಿಂಧನೂರು ತಾಲೂಕು ಕೇಂದ್ರ ಜಿಲ್ಲಾ ಕೇಂದ್ರವಾಗುವ ಎಲ್ಲ ರೀತಿಯ ಸಾಮರ್ಥ್ಯವನ್ನು ಹೊಂದಿದೆ. ಅವಶ್ಯವಾದ ಭೌಗೋಳಿಕ, ಆರ್ಥಿಕ ಅನುಕೂಲತೆಗಳನ್ನು ಮತ್ತು ಸಾಮಾಜಿಕ, ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ತಾಲೂಕು ಕೇಂದ್ರದ ಮೂಲಕ 1 ರಾಷ್ಟ್ರೀಯ ಹೆದ್ದಾರಿ, 2 ರಾಜ್ಯ ಹೆದ್ದಾರಿಗಳು, ಹಾದು ಹೋಗಿವೆ. ಇತ್ತೀಚೆಗೆ ರೈಲುಗಳ ಓಡಾಟವೂ ಶುರುವಾಗಿದೆ. ಕೃಷಿ, ಸಾರಿಗೆ, ಸಂಪರ್ಕ, ಶಿಕ್ಷಣ, ವಾಣಿಜ್ಯ-ವ್ಯಾಪಾರ-ವಹಿವಾಟು, ಅಂತಾರಾಜ್ಯ ಸಂಪರ್ಕ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ನಗರ ಬೆಳೆಯುತ್ತಿದ್ದು, ಅಂತಾರಾಜ್ಯ ವ್ಯಾಪಾರ ಕೇಂದ್ರವಾಗಿಯೂ ಗಮನ ಸೆಳೆಯುತ್ತಿದೆ. ಹಾಗಾಗಿ ಎಲ್ಲ ರೀತಿಯಲ್ಲಿಯೂ ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸಾಮರ್ಥ್ಯವನ್ನು ಹೊಂದಿದೆ. ರಾಯಚೂರು, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಬಾಗಲಕೋಟ ಹಾಗೂ ಕಲಬುರಗಿ ಜಿಲ್ಲೆ ಸೇರಿದಂತೆ ಆಂಧ್ರ-ತೆಲಂಗಾಣದ ಹಲವು ಜಿಲ್ಲೆಗಳಿಗೆ ಸಿಂಧನೂರು ಜಂಕ್ಷನ್ನಂತಿದೆ ಎಂಬುದು ಕೆಲ ತಜ್ಞರ ಹಾಗೂ ಸಾರ್ವಜನಿಕರ ಅಭಿಮತವಾಗಿದೆ.
ಸರ್ವ ಜನಾಂಗಗಳ ‘ಮಿನಿ ಇಂಡಿಯಾ’
ಸಿಂಧನೂರು ತಾಲೂಕು ಕೇಂದ್ರ ಸೇರಿದಂತೆ ಆಸುಪಾಸು ವ್ಯಾಪ್ತಿಯ ಪ್ರದೇಶಗಳಲ್ಲಿ ಎಲ್ಲ ವರ್ಗದ ಜನ ಸಮುದಾಯಗಳು ನೆಲೆ ಕಂಡುಕೊಂಡಿವೆ. ಬಂಗಾಲಿಗಳು, ರಾಜಸ್ಥಾನ, ಆಂಧ್ರ, ತಮಿಳುನಾಡು, ಕೇರಳ, ಪಂಜಾಬ್ ಹೀಗೆ ಹಲವು ರಾಜ್ಯಗಳ ಜನರು ಇಲ್ಲಿ ಬಹಳಷ್ಟು ವರ್ಷಗಳಿಂದ ಜೀವನ ನಡೆಸುತ್ತಿದ್ದು, ಸಿಂಧನೂರು ಒಂದು ರೀತಿಯಲ್ಲಿ ‘ಮಿನಿ ಇಂಡಿಯಾ’ ಬಹು ಭಾಷಿಕರ ನೆಲೆಯಾಗಿಯೂ ಮತ್ತು ಸಾಂಸ್ಕೃತಿಕ ಸಮ್ಮಿಳನವನ್ನು ಹೊಂದಿದೆ ಎನ್ನುವುದು ಹಲವರ ಮಾತಾಗಿದೆ.
ಜಿಲ್ಲಾ ಕೇಂದ್ರಕ್ಕೆ ಯಾವ್ಯಾವ ತಾಲೂಕು ?
ಮಸ್ಕಿ, ಕಾರಟಗಿ, ಕನಕಗಿರಿ, ಸಿರುಗುಪ್ಪ ಸೇರಿಸಿಕೊಂಡು ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲಾಗುತ್ತದೆ ಎನ್ನುವ ಮಾತುಗಳು ಒಂದೆಡೆಯಾದರೆ, ಮಸ್ಕಿ, ಕಾರಟಗಿ, ಸಿರುಗುಪ್ಪ, ಲಿಂಗಸುಗೂರು ಒಳಗೊಂಡ ಜಿಲ್ಲಾ ಕೇಂದ್ರ ರಚಿಸಬಹುದಾಗಿದೆ ಎನ್ನುವ ಚರ್ಚೆ ಮತ್ತೊಂದು ಕಡೆ. ಜಿಲ್ಲಾ ಕೇಂದ್ರದಿಂದ ಅತ್ಯಂತ ಹೆಚ್ಚು ಅಂತರದಲ್ಲಿರುವ (ದೂರ), ಆಡಳಿತಾತ್ಮಕ ತೊಂದರೆ ಎದುರಿಸುತ್ತಿರುವ ತಾಲೂಕು ಕೇಂದ್ರಗಳನ್ನು ಮುಖ್ಯವಾಗಿ ಪರಿಗಣಿಸಿ, ಮುಂಬರುವ ದಿನಗಳಲ್ಲಿ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಹಾಗೂ ಪಾರದರ್ಶಕ ಮತ್ತು ಗುಣಮಟ್ಟದ ಆಡಳಿತ ನೀಡುವ ಸದುದ್ದೇಶದಿಂದ ವೈಜ್ಞಾನಿಕ ನಿಯಮಗಳ ಆಧಾರದ ಮೇಲೆ, ಸಮಿತಿಯ ತೀರ್ಮಾನ ಆಧರಿಸಿ ನೂತನ ಜಿಲ್ಲೆಯಲ್ಲಿ ಯಾವ್ಯಾವ ತಾಲೂಕು ಇರಬೇಕೆನ್ನುವುದನ್ನು ತೀರ್ಮಾನಿಸಲಾಗುತ್ತದೆ ಎನ್ನುವ ಅಭಿಪ್ರಾಯಗಳೂ ಇವೆ.
ರಿಯಲ್ ಜಿಗಿತ ?
ಈಗಾಗಲೇ ಹಲವು ದಿನಗಳಿಂದ ಸಿಂಧನೂರು ಜಿಲ್ಲಾ ಕೇಂದ್ರವಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸುದ್ದಿಯಿದ್ದು, ಈಗಾಗಿ ರಿಯಲ್ ಎಸ್ಟೇಟ್ ದರ ಮುಗಿಲೆತ್ತರಕ್ಕೆ ಜಿಗಿದಿರುವುದೇ ಸಾಕ್ಷಿಯಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರು “ನೋಡ್ರಿ ಸಿಂಧನೂರು ಜಿಲ್ಲೆಯಾದ್ರೆ, ಆಗ ನಿಮಗೆ ಈ ರೇಟಿಗೆ ಪ್ಲಾಟ್ ಸಿಂಗಗಿಲ್ಲ ನೋಡ್ರಿ” ಎಂದು ಹೇಳುತ್ತಲೇ, ಪ್ಲಾಟುಗಳನ್ನು ಮಾರಾಟ ಮಾಡುತ್ತಿದ್ದು, ಜಿಲ್ಲಾ ಕೇಂದ್ರವಾಗುವ ಮುನ್ನವೇ ರಿಯಲ್ ಎಸ್ಟೇಟ್ ಉದ್ಯಮ ಜಿಗಿತಕಂಡಿದೆ.