ನಮ್ಮ ಸಿಂಧನೂರು, ಅಕ್ಟೋಬರ್ 02
ಬಹುತ್ವ ಭಾರತ ಅಭಿವೃದ್ಧಿಯಲ್ಲಿ ಮುನ್ನೆಜ್ಜೆ ಇಡಲು ಗಾಂಧೀಜೀಯವರು ತೋರಿದ ಶಾಂತಿ, ಅಹಿಂಸಾ ಮಾರ್ಗದ ಸೂತ್ರಗಳು ಭಾರತೀಯರ ಉಸಿರಾಗಬೇಕಿದೆೆ ಎಂದು ಉಪನ್ಯಾಸಕ ದವಲಸಾಬ್ ಅಭಿಮತ ವ್ಯಕ್ತಪಡಿಸಿದರು.
ನಗರದ ಎಲ್.ಬಿ.ಕೆ ಪಿಯು ಮತ್ತು ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಪೀಳಿಗೆಯವರಲ್ಲಿ ಉದಾತ್ತ ಚಿಂತಕರ ಬಗೆಗೆ ಓದುವ ಮತ್ತು ತಿಳಿದುಕೊಳ್ಳುವ ಕುತೂಹಲ ಕ್ಷೀಣಿಸುತ್ತಿದೆ. ದಬ್ಬಾಳಿಕೆ, ತಂತ್ರಗಾರಿಕೆಯಿಂದ ಇಡೀ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಬ್ರಿಟೀಷರ ವಿರುದ್ಧ, ಶಾಂತಿ, ಸತ್ಯಮಾರ್ಗದೊಂದಿಗೆ ಜನರನ್ನು ಸಂಘಟಿಸಿ ದೇಶದ ವಿಮೋಚನೆಗೆ ಮುನ್ನುಡಿ ಬರೆದ ಗಾಂಧೀಜಿಯವರ ತತ್ತ್ವಾದರ್ಶಗಳು ಅನುಕರಣೀಯ. ಇಂದಿನ ದಿನಗಳಲ್ಲಿ ಶಾಂತಿ ಮಾಯವಾಗಿ, ಬಂದೂಕು-ಬಾಂಬುಗಳು ಸದ್ದು ಮಾಡುತ್ತಿವೆ. ಅಶಾಂತಿ ವಾತಾವರಣದಲ್ಲಿ ಸಹಜ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವೇ ? ಎಂದು ಕಳವಳ ವ್ಯಕ್ತಪಡಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿನಿ ದವಲಮ್ಮ ಮಾತಾನಾಡಿ, ಗಾಂಧೀಜಿಯವರ ಆದರ್ಶಗಳು ಕೇವಲ ಬಾಯಿಮಾತಾಗದೇ ಆಚರಣೆಗೆ ಬರಬೇಕಿದೆ. ದೇಶದ ಸ್ವಾತಂತ್ರö್ಯ ಚಳವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಗಾಂಧೀಜಿಯವರ ಜೀವನ ಸಂದೇಶ ಯುವಜನರಿಗೆ ಪ್ರೇರಣಾದಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಅರುಣಕುಮಾರ ಬೇರಿಗಿ, ಖಜಾಂಚಿ ಜಯಪ್ಪ ಗೊರೆಬಾಳ, ನೊಬೆಲ್ ಕಾಲೇಜಿನ ಪ್ರಾಂಶುಪಾಲರಾದ ಐಶ್ವರ್ಯ ದಳವಾಯಿ, ಉಪನ್ಯಾಸಕರಾದ ವೀರೇಶ, ವಸಂತಕುಮಾರ ಅಮರೇಶ, ಕು.ಜ್ಯೋತಿ , ಕವಿತಾ, ಕಾವೇರಿ ಮುಕ್ತುಂಬಿ ಶ್ರೀಮತಿ ಗಿರಿಜಾ, ಕೃಷ್ಣ ಹಾಗೂ ಇನ್ನಿತರರು ಇದ್ದರು. ಎನ್ಎಸ್ಎಸ್ ಅಧಿಕಾರಿ ಹೊನ್ನಪ್ಪ ಬೆಳಗುರ್ಕಿ ನಿರೂಪಿಸಿದರು.