ಸಿಂಧನೂರು: ಭಗತ್‌ಸಿಂಗ್ ವಿಶ್ವಕ್ಕೆ ಮಾಡಲ್: ನಾಗರಾಜ ಪೂಜಾರ್

Spread the love

ನಮ್ಮ ಸಿಂಧನೂರು ಸೆಪ್ಟೆಂಬರ್ 28
ದೇಶದ ಜನರ ವಿಮೋಚನೆಗಾಗಿ, ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಪ್ರತಿಭಟಿಸಿ ಚಿಕ್ಕವಯಸ್ಸಿನಲ್ಲೇ ನಗುನಗುತ್ತಲೇ ನೇಣುಗಂಬ ಏರಿದ ಹುತಾತ್ಮ ಭಗತ್‌ಸಿಂಗ್, ತಮ್ಮ ಆದರ್ಶ, ಗುರಿ, ತ್ಯಾಗದ ಕಾರಣ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಬಣ್ಣಿಸಿದರು.
ನಗರದ ಗಡಿಯಾರ ಚೌಕ್‌ನಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಭಗತ್‌ಸಿಂಗ್ ಅವರು ಸಮಾನತೆಯ ಗುರಿಯನ್ನು ಹೊಂದಿದ್ದರು. “ಈ ನೆಲದ ಶ್ರಮಜೀವಿಗಳೆಲ್ಲ ಒಂದಾಗಿ, ದೇಶದ ಸಂಪತ್ತನ್ನು ಸೂರೆಗೊಳ್ಳಲು, ಇಲ್ಲಿನ ಅನಕ್ಷರಸ್ಥ, ಬಡ ಹಾಗೂ ಅಂತರ್ಯುದ್ಧಪೀಡಿತ ಜನರನ್ನು ಶೋಷಿಸಲು ಬಂದ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳನ್ನು ದೇಶಬಿಟ್ಟು ಓಡಿಸಿ” ಎಂಬ ಕರೆಯನ್ನು ಅವರು ಅಂದೇ ನೀಡಿದ್ದರು ಎಂದರು.
‘ಮಾಧ್ಯಮಗಳಲ್ಲಿ ಅನವಶ್ಯಕ ಚರ್ಚೆ’
ದುಡಿಯುವ ವರ್ಗದ ಜನರು ತಮ್ಮ ಹಕ್ಕುಗಳಿಗಾಗಿ ಹಾಗೂ ಬದುಕಿನ ಪ್ರಶ್ನೆಗಳಿಗಾಗಿ ಹೋರಾಟ ಮಾಡಿದರೆ ಅದು ಮಾಧ್ಯಮಗಳಲ್ಲಿ ಒಂದಿಷ್ಟೂ ಸುದ್ದಿಯಾಗುವುದಿಲ್ಲ. ಆದರೆ, ಮುಂಜಾನೆಯಿAದ ರಾತ್ರಿಯವರೆಗೂ ಯಾವುದೋ ನಟನ ಬಗೆಗಿನ ಅನವಶ್ಯಕ ವಿಷಯ ಚರ್ಚೆಯಾಗುತ್ತದೆ, ಅದೇ ವಿಷಯವೇ ದಿನಪೂರ್ತಿ ಬಿತ್ತರವಾಗುತ್ತದೆ. ನಿರುದ್ಯೋಗ, ಅಗತ್ಯವಸ್ತುಗಳ ಬೆಲೆ ಏರಿಕೆ, ಕಾರ್ಮಿಕ ವಿರೋಧಿ ಕಾನೂನುಗಳು ಹಾಗೂ ಜನರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಸಂಪೂರ್ಣ ಅಲಕ್ಷö್ಯವಹಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

Namma Sindhanuru Click For Breaking & Local News

‘6 ತಿಂಗಳ ಕಾಲ ಮದುವೆ’
‘6 ತಿಂಗಳ ಕಾಲ ಉದ್ಯಮಿ ಅಂಬಾನಿ ತನ್ನ ಮಗನ ಮದುವೆಯನ್ನು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಾಡಿದ. ಇದು ಯಾರ ದುಡ್ಡು ಸಾರ್ವಜನಿಕರ ತೆರಿಗೆ ಹಣವಲ್ಲವೇ ? ಮದುವೆಗೆ ಮುಂಚೆಯೇ ತನ್ನ ಒಡೆತನದ ಕಂಪನಿಯ ಮೊಬೈಲ್ ರಿಚಾರ್ಜ್‌ ಅನ್ನು ಒಮ್ಮಿಂದೊಮ್ಮೆಲೇ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಜೇಬಿನಿಂದಲೇ ಮಗನ ಮದುವೆ ಖರ್ಚುನ್ನು ವಸೂಲಿ ಮಾಡಿದ. ಈ ಬಂಡವಾಳಿಗರು ಜನರ ಮೇಲೆ ತೆರಿಗೆಯ ಭಾರವನ್ನು ಹಾಕುವ ಮೂಲಕ ಕೋಟ್ಯಂತರ ರೂಪಾಯಿಯನ್ನು ಲೂಟಿ ಹೊಡೆಯುತ್ತಿವೆ’ ಎಂದು ಪೂಜಾರ್ ವಿಶ್ಲೇಷಿಸಿದರು.
‘ಜನರಿಗೆ ಧರ್ಮ, ಗುಡಿ-ಗುಂಡಾರ, ಜಾತಿಯ ನಶೆ ಏರಿಸಿ ಲೂಟಿ’
ಜನರಿಗೆ ಧರ್ಮ, ಗುಡಿ-ಗುಂಡಾರ ಹಾಗೂ ಜಾತಿಯ ನಶೆ ಏರಿಸಿ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಅದಾನಿ, ಅಂಬಾನಿ ಸೇರಿದಂತೆ ಎಂಎನ್‌ಸಿ ಕಂಪನಿಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ಹಲವು ಉದ್ಯಮಗಳನ್ನು ಹರಾಜು ಹಾಕುವ ಮೂಲಕ ಸಾರ್ವಜನಿಕ ಸಂಪತ್ತನ್ನು ಬಿಕರಿಗಿಟ್ಟಿದೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದುಡಿಯುವ ವರ್ಗವನ್ನು ಶೋಷಿಸಲಾಗುತ್ತಿದೆ. ಸರ್ಕಾರಗಳ ನೀತಿಗಳಿಂದ ನಿರುದ್ಯೋಗ, ಬಡತನ, ಅಸಮಾನತೆ ಹೆಚ್ಚುತ್ತಿದ್ದು, ಅರಾಜಕ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಭಗತ್ ಆದರ್ಶ ಸ್ಪೂರ್ತಿಯಾಗಲಿ’
ದೇಶದ ಸಮಸ್ತ ಜನರ ಏಳಿಗೆಗಾಗಿ ಮತ್ತು ಅವರ ಬದುಕಿನಮಟ್ಟ ಸುಧಾರಣೆಗಾಗಿ ಭಗತ್‌ಸಿಂಗ್ ಆದರ್ಶಗಳು ಸ್ಫೂರ್ತಿಯಾಗಬೇಕಿದೆ. ಪ್ರತಿಯೊಬ್ಬರೂ ದುಡಿಯುವ ವರ್ಗದ ಹೋರಾಟ, ಚಳವಳಿಯನ್ನು ಬೆಂಬಲಿಸುವ ಮೂಲಕ, ದುಡಿಯುವ ಜನರ ಹಕ್ಕುಬಾಧ್ಯತೆಗಳಿಗಾಗಿ ಹೋರಾಟಗಳನ್ನು ಕಟ್ಟುವ ಮೂಲಕ ಸಂಘಟಿತರಾಗಬೇಕಿದೆ ಎಂದು ನಾಗರಾಜ್ ಪೂಜಾರ್ ಕರೆ ನೀಡಿದರು.
‘ಆಟೋ ಚಾಲಕರ ಹಕ್ಕುಗಳಿಗಾಗಿ ಹೋರಾಡೋಣ’
ಮಿತ ಆದಾಯದಲ್ಲಿ ಅತ್ಯಂತ ಕಷ್ಟಕರ ಜೀವ ನಡೆಸುತ್ತಿರುವ ಆಟೋ ಚಾಲಕರು, ಹಲವು ಸಮಸ್ಯೆಗಳ ಸುಳಿಯಲ್ಲಿ ಜೀವನ ನಡೆಸುತ್ತಿದ್ದಾರೆ. ದಿನದ ದುಡಿಮೆಯಲ್ಲಿ ಜೀವನ ನಡೆಸಲಾಗದೇ ಅತ್ತ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲಾಗದಂತಹ ದುಃಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಆಟೋ ಚಾಲಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ ಎಂದು ಭಗತ್ ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಹೇಳಿದರು.
ಭಗತ್‌ಸಿಂಗ್ ಆಟೋ ಚಾಲಕರ ಸಂಘ, ಆಟೋ ಚಾಲಕರ ನಡುವೆ ಕೆಲಸ ಮಾಡುತ್ತಿದ್ದು, ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಂಘದ ಗಮನಕ್ಕೆ ತರುವ ಮೂಲಕ ಸಂಘಟಿತರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಆಟೋ ಚಾಲಕರು ಇದ್ದರು. ಜಯಂತಿ ಪ್ರಯುಕ್ತ ಭಗತ್‌ಸಿಂಗ್ ಅವರ ಭಾವಚಿತ್ರಕ್ಕೆ ಹೂಹಾರ ಹಾಕಿ ಗೌರವ ಸಲ್ಲಿಸಲಾಯಿತು.


Spread the love

Leave a Reply

Your email address will not be published. Required fields are marked *