ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 21
ಅಕ್ಟೋಬರ್ 4ರಿಂದ 9 ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿರುವ ‘ಸಿಂಧನೂರು ದಸರಾ ಉತ್ಸವ’ಕ್ಕೆ ಆರಂಭದಲ್ಲೇ ಭಿನ್ನ ಸ್ವರಗಳು ಕೇಳಿಬರುತ್ತಿವೆ. ಯಾರಿಗಾಗಿ, ಯಾಕಾಗಿ ದಸರಾ ಉತ್ಸವ ? ಎಂಬ ಆಕ್ಷೇಪಗಳು ಸಾರ್ವಜನಿಕ ವಲದಿಂದ ಧ್ವನಿಸುತ್ತಿದ್ದರೆ, ಇತ್ತೀಚೆಗೆ ತಾ.ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ತಾಲೂಕು ಪಂಚಾಯಿತಿಯ ಸ್ವಂತ ನಿಧಿಯಿಂದ ಹಣ ಬಳಕೆಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ತಕರಾರು ವ್ಯಕ್ತಪಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ದಿನಾಂಕ: 18-09-2024ರಂದು ತಾಲೂಕು ಪಂಚಾಯಿತಿಯಲ್ಲಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಸರಾ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಚರ್ಚೆ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಯಿತು.
ತಾ.ಪಂ.ನಿಂದ 25 ಲಕ್ಷ ರೂ ?
ತಾಲೂಕು ಪಂಚಾಯಿತಿಯ ಸ್ವಂತ ನಿಧಿಯಿಂದ ಸಿಂಧನೂರು ದಸರಾ ಉತ್ಸವಕ್ಕೆ ೨೫ ಲಕ್ಷ ರೂಪಾಯಿ ನೀಡಲು, ರಾಯಚೂರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರೊಂದಿಗೆ ಚರ್ಚಿಸಲಾಗಿದ್ದು, ಅನುಮೋದನೆ ಪಡೆದುಕೊಂಡು ಅನುದಾನ ನೀಡುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಶಾಸಕರಾದ ಹಂಪನಗೌಡ ಅವರು ಸೂಚಿಸಿದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ, ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಸರ್ಕಾರದ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವಂತೆ ತಕರಾರರು ಎತ್ತಿದ್ದು, ವಿವಾದದ ಸ್ವರೂಪ ಪಡೆದುಕೊಂಡಿರವುದು ಸಾರ್ವಜನಿಕ ವಲಯದಲ್ಲಿ ತರಹೇವಾರಿ ಚರ್ಚೆಗಳಿಗೆ ಆಹಾರವಾಗಿದೆ.
ಆರಂಭದಲ್ಲೇ ವಿಭಿನ್ನ ರಾಗ !
ಸಿಂಧನೂರು ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಪಕ್ಷದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ್ದು, ಈ ನಡುವೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಜನಪ್ರತಿನಿಧಿಗಳ ಉತ್ಸವದ ಬಗ್ಗೆ ಕೆಲ ಸಂಘಟನೆಗಳ ಮುಖಂಡರು ಸೇರಿದಂತೆ ಕೆಲ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರೇ ತಾಲೂಕು ಪಂಚಾಯಿತಿಯ ಸ್ವಂತ ನಿಧಿಯಿಂದ ಹಣ ಬಳಕೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದು, ಭಿನ್ನರಾಗ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಸ್ವಪಕ್ಷೀಯರ ಮುನಿಸು ?
ಸಿಎಂ ಸಿದ್ದರಾಮಯ್ಯ ಅವರನ್ನು ಸಿಂಧನೂರು ದಸರಾಕ್ಕೆ ಆಹ್ವಾನಿಸಲು ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಅಕ್ಟೋಬರ್ 4ರಿಂದ 12ನೇ ತಾರೀಖಿನವರೆಗೆ ನಡೆಯುವ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಮುಂಚೂಣಿ ಮುಖಂಡರು ದಸರಾ ಉತ್ಸವಕ್ಕೆ ಕೈಜೋಡಿಸಿರುವುದು ಹಲವರ ಅಚ್ಚರಿಗೆ ಕಾರಣವಾಗಿದ್ದರೆ, ಇತ್ತ ಸ್ವಪಕ್ಷೀಯ ಕೆಲ ನಾಯಕರ ‘ಮುನಿಸು’ ಸಂಚಲನ ಸೃಷ್ಟಿಸಿದೆ.