ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 20
ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಸಿಂಧನೂರು ಸಬ್ ರಿಜಿಸ್ಟಾçರ್ ಆಫೀಸ್ನಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದ ಕಾರಣ, ಶುಕ್ರವಾರ ಎಂದಿನಂತೆ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸಂತೆಯ ವಾತಾವರಣ ಕಂಡುಬಂತು. ಆನ್ಲೈನ್ನಲ್ಲಿ ನೋಂದಣಗೆ ಅರ್ಜಿ ಹಾಕಿದ್ದ, ಅರ್ಜಿದಾರರು ದಾಖಲೆಗಳೊಂದಿಗೆ ಆಫೀಸ್ ಕಾರ್ಯಾಲಯದ ಆಜುಬಾಜು ಜಮಾವಣೆಗೊಂಡಿದ್ದರು. ತಹಸೀಲ್ ಕಾರ್ಯಾಲಯ ಬೆಳಿಗ್ಗೆಯಿಂದಲೇ ಗೀಜಗನ ಗೂಡಿನಂತೆ ಕಂಡುಬಂತು. ಕಾರ್ಯಾಲಯದ ಆವರಣ ವಾಹನಗಳಿಂದ ತುಂಬಿ ತುಳುಕಿತು.
ಸರ್ವರ್ ಟ್ರಬಲ್,
ಬುಧವಾರ ಮತ್ತು ಗುರುವಾರ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಪ್ರಕ್ರಿಯೆಗೆ ಅಡಚಣೆಯಾಗಿದ್ದರಿಂದ ಬಹಳಷ್ಟು ಫೈಲ್ಗಳು ಪೆಂಡಿಂಗ್ ಉಳಿದ ಪರಿಣಾಮ, ಆನ್ಲೈನ್ ಮೂಲಕ ಅರ್ಜಿಹಾಕಿ ಶೆಡ್ಯೂಲ್ ಪಡೆದುಕೊಂಡ ಅರ್ಜಿದಾರರು ಆಫೀಸ್ಗೆ ಧಾವಿಸಿದ್ದರಿಂದ ಜನಜಂಗುಳಿಯ ವಾತಾವರಣ ಕಂಡುಬಂತು. ಸಾಮಾನ್ಯವಾಗಿ ಪ್ರತಿದಿನವೂ ಸಿಂಧನೂರು ನೋಂದಣಿ ಕಾರ್ಯಾಲಯದಲ್ಲಿ ಹೆಚ್ಚು ನೋಂದಣಿಯಾಗುತ್ತಿದ್ದು, ಈ ನಡುವೆ ಎನಿವೇರ್ಗೆ ನೋಂದಣಿಗೆ ಅವಕಾಶ ನೀಡಿರುವುದರಿಂದ ಇನ್ನಷ್ಟು ನೋಂದಣಿ ಅರ್ಜಿಗಳು ಇದೇ ಆಫೀಸ್ಗೆ ಬಂದಿರಬಹುದು ಎಂದು ನೋಂದಣಿಗೆ ಬಂದಿದ್ದ ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ನೋಂದಣಿಗೆ ಹರಸಾಹಸ, ಸಾರ್ವಜನಿಕರ ಪಡಿಪಾಟಲು
“ಆನ್ಲೈನ್ನಲ್ಲಿ ಅರ್ಜಿಹಾಕಿ, ಸ್ಟ್ಯಾಂಪ್ ಡ್ಯೂಟಿ ಕಟ್ಟಿ ಬಂದು ನೋಂದಣಿ ಕಾರ್ಯಾಲಯದಲ್ಲಿ ನೂಕು ನುಗ್ಗಲು ಅನುಭವಿಸುವಂತಾಗಿದೆ. ಕೌಂಟರ್ಗಳ ಕೊರತೆ, ಇಕ್ಕಟ್ಟಾದ ಜಾಗ, ಕುಳಿತುಕೊಳ್ಳಲು ಕನಿಷ್ಠ ಆಸನಗಳಿಲ್ಲ, ಎಲ್ಲವೂ ಅವಸರವಸರವಾಗಿ ಮುಗಿಸಿಕೊಂಡು ಹೋಗುವಂತಾಗಿದೆ. ಇಂತಹ ಸಮಯದಲ್ಲಿ ದಾಖಲೆಪತ್ರಗಳಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಹೊಣೆಗಾರರು ಯಾರು ? ಇಲಾಖೆಯ ಎಡವಟ್ಟಿನಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿ ನೋಂದಣಿ ಪ್ರಕ್ರಿಯೆ ಮುಗಿಸಿಕೊಂಡು ಹೋಗುವಂತಾಗಿದೆ” ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ನೋಂದಣಿಗೆ ಮುಗಿಬಿದ್ದರು !
ನೋಂದಣಿ ಇಲಾಖೆಯ ತಾಂತ್ರಿಕ ಸಮಸ್ಯೆ, ಶುಕ್ರವಾರ ನೋಂದಣಿಗೆ ಕಾರ್ಯಾಲಯಕ್ಕೆ ಬಂದವರು ಪೇಚಿಗೆ ಸಿಲುಕುವಂತಾಯಿತು. ರಿಜಿಸ್ಟಾçರ್ ಆಫೀಸ್ನ ಕೊಠಡಿಯ ಮುಂದೆ ಮತ್ತು ಒಳಗೆ ಹೋಗಲು ನೂಕು ನುಗ್ಗಲು ಅನುಭವಿಸುವಂತಾಯಿತು. ಕೆಲವರು ನೋಂದಣಿಗಾಗಿ ಮುಗಿಬೀಳುವಂತಾಯಿತು. ಇದರಿಂದ ಬಹಳಷ್ಟು ಜನರು ಸಮಸ್ಯೆ ಅನುಭವಿಸಿದರು. ನೋಂದಣಿ ಪ್ರಕ್ರಿಯೆಗೆ ಬಂದಿದ್ದ ವಯೋವೃದ್ಧರು, ಮಹಿಳೆಯರು ಕೆಲವೊತ್ತು ಪರಿತಪಿಸಿದರು. ಚರಾಸ್ತಿ, ನಿವೇಶನ ಸೇರಿದಂತೆ ಬಹಳಷ್ಟು ಜಮೀನುಗಳು ಮನೆಯ ಹಿರಿಯ ಯಜಮಾನರು, ಇಲ್ಲವೇ ಹಿರಿಯ ಮಹಿಳೆಯರ ಹೆಸರಿನಲ್ಲಿರುವುದು ವಾಡಿಕೆ. ಅದರಂತೆ ನೋಂದಣಿ ಪ್ರಕ್ರಿಯೆಗಾಗಿ ಕಚೇರಿಗೆ ಆಗಮಿಸಿದ್ದ ವಯೋವೃದ್ಧರು, ಮಹಿಳೆಯರು ಹಾಗೂ ವಿಕಲಚೇತನರು ಸಮಸ್ಯೆ ಅನುಭವಿಸಿದರು.