ನಮ್ಮ ಸಿಂಧನೂರು, ಸೆಪ್ಟೆಂಬರ್ 20
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡ್ಯೂಟಿ ಟೈಮ್ಗೆ ವೈದ್ಯರು ಕೈಕೊಡುತ್ತಿದ್ದು, ಚಿಕಿತ್ಸೆಗೆ ಬರುವ ರೋಗಿಗಳು, ವೈದ್ಯರು ಕೊಠಡಿಯಲ್ಲಿ ಇಲ್ಲದೇ ಇರುವುದನ್ನು ಕಂಡು ವಾಪಸ್ ಹೋಗುತ್ತಿದ್ದಾರೆ. ಇನ್ನೂ ಕೆಲವರು ವೈದ್ಯರು ಇದ್ದಾರೆ ಎಂದು ಗಂಟೆಗಟ್ಟಲೆ ಕುಳಿತು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು “ಆಯಾ ದಿನ ಕರ್ತವ್ಯದಲ್ಲಿರಬೇಕಾದ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ. ಆಸ್ಪತ್ರೆಯ ನೋಟಿಸ್ ಬೋರ್ಡ್ನಲ್ಲಿ ಡ್ಯೂಟಿ ವೈದ್ಯರು ಯಾರಿದ್ದಾರೆಂದು ನಮೂದಿಸುತ್ತಿಲ್ಲ. ಕೆಲಬಾರಿ ಬೆಳಿಗ್ಗೆ ಬಂದ ವೈದ್ಯರು ನಿಗದಿತ ಸಮಯಕ್ಕೂ ಮುನ್ನವೇ ಹೊರಹೋಗುತ್ತಿದ್ದು, ಆನಂತರ ಬರುತ್ತಿಲ್ಲ. ಗುರುವಾರ ದಿನ ವೈದ್ಯರ ಕೆಲ ಕೊಠಡಿಗಳಲ್ಲಿ 12.30ರ ಸುಮಾರಿಗೆ ವೈದ್ಯರು ಇಲ್ಲದೇ ಇರುವುದು ಕಂಡುಬಂತು. ಸಿಎಂಒ ಅವರು ರಜೆಯಲ್ಲಿದ್ದಾಗ ಕೆಲ ವೈದ್ಯರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ” ಎಂದು ಅವರು ತಿಳಿಸಿದ್ದಾರೆ.
ಮತ್ತೇ ಅದೇ ರಾಗ ಅದೇ ಚಾಳ !
“ಕಳೆದ ಎರಡು ವಾರದ ಹಿಂದೆ ನೋವಿನಿಂದ ನರಳುತ್ತಿದ್ದ ಬಾಲಕನೊಬ್ಬನಿಗೆ ಚಿಕಿತ್ಸೆ ಸಿಗದೇ ಇದ್ದಾಗ ನಮ್ಮ ಸಂಘಟನೆಯಿAದ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದಾಗ ಆಸ್ಪತ್ರೆಯ ಸಿಎಂಒ ಅವರು ಕರ್ತವ್ಯ ಲೋಪ ಎಸಗುವ ಮತ್ತು ಸರಿಯಾದ ಸಮಯಕ್ಕೆ ಬರದೇ ಇರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಈ ಕುರಿತು ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಎಸಿ, ತಹಸೀಲ್ದಾರ್ ಹಾಗೂ ಡಿಎಚ್‌ಒ ಅವರಿಗೆ ಮನವಿಪತ್ರ ನೀಡಿ ಗಮನ ಸೆಳೆದಿದ್ದವೂ. ಇಷ್ಟರ ನಡುವೆಯೂ ಪುನಃ ವೈದ್ಯರು ಅದೇ ರೀತಿ ವರ್ತನೆ ಮಾಡುತ್ತಿದ್ದಾರೆ ಹೀಗಾದರೆ ಬಡ ರೋಗಿಗಳ ಪರಿಸ್ಥಿತಿ ಹೇಗೆ” ಎಂದು ಮಂಜುನಾಥ ಗಾಣಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.