ಸಿಂಧನೂರು: ಆಮೆಗತಿಯಲ್ಲಿ ಸಾಗಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್‌ 10

ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳೆದ ಕೆಲವು ದಿನಗಳಿಂದ ಆಮೆಗತಿಯಲ್ಲಿ ಸಾಗಿದ್ದು, ಅವಧಿ ಮುಗಿದರೂ ಇನ್ನೂ ಟೈಲ್ಸ್‌ ಅಳವಡಿಸುವ ಹಂತದಲ್ಲೇ ಇದೆ. ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ಚಾಲ್ತಿಯಲ್ಲಿದ್ದು, ನಾನಾ ಕಾರಣಗಳಿಂದ ಕಾಮಗಾರಿ ಕೆಲವು ದಿನಗಳಿಂದ ನನೆಗುದಿ ಬಿದ್ದಿತ್ತು. ಆದರೆ ಇತ್ತೀಚೆಗೆ ಕೆಲಸ ಪುನಃ ಪ್ರಾರಂಭಗೊಂಡಿದ್ದರೂ ಪೂರ್ಣಗೊಂಡಿಲ್ಲ.
ಟೈಲ್ಸ್‌ ಅಳವಡಿಕೆ, ಮೇಲ್ಮಡಿ ನಿರ್ಮಾಣ ಪ್ರಗತಿಯಲ್ಲಿ !
ತಾಯಿ, ಮಕ್ಕಳ ಆಸ್ಪತ್ರೆಯ ನೆಲಮಹಡಿಯಲ್ಲಿ ಟೈಲ್ಸ್‌ ಅಳವಡಿಕೆ ಕೆಲಸ ನಡೆಯುತ್ತಿದ್ದು, ಮೇಲ್ಮಡಿ ನಿರ್ಮಾಣಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ವಿದ್ಯುತ್‌ ಸಂಪರ್ಕ, ವೈರ್‌ ಅಳವಡಿಕೆ ಸೇರಿದಂತೆ ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ಕಟ್ಟಡ ಕಾಮಗಾರಿ ಪೂರ್ಣಗೊಂಡು ಜನರಿಗೆ ಬೇಗ ಉಪಯೋಗಕ್ಕೆ ದೊರೆಯಲಿದೆ ಎಂಬ ಆಶಾಭಾವನೆ ಇತ್ತು. ಆದರೆ ಮತ್ತಷ್ಟು ವಿಳಂಬ ಆಗುತ್ತಿರುವುದರಿಂದ ಶೀಘ್ರ ಉದ್ಘಾಟನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದು ಸಾರ್ವಜನಿಕರೊಬ್ಬರ ಅಭಿಪ್ರಾಯವಾಗಿದೆ.

Namma Sindhanuru Click For Breaking & Local News

ʼಅವಧಿ ಮುಗಿದಿದೆ, ಪೆನಾಲ್ಟಿ ಮೇಲೆ ಕೆಲಸ ನಡೆದಿದೆʼ
“ಇಷ್ಟೊತ್ತಿಗಾಗಲೇ ಕಟ್ಟಡ ಕಾಮಗಾರಿ ಕೆಲಸ ಮುಗಿಯಬೇಕಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಪೂರ್ಣಗೊಳ್ಳುವಲ್ಲಿ ಬಹಳಷ್ಟು ವಿಳಂಬವಾಗಿದೆ. ಕಲಬುರಗಿ ಮೂಲಕ ಗುತ್ತಿಗೆದಾರರೊಬ್ಬರು ನಿರ್ವಹಣೆಯ ಹೊಣೆ ಹೊತ್ತಿದ್ದು, ಇನ್ನೇನು ಒಂದೂವರೆ ಇಲ್ಲವೇ ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ” ಎಂದು ಕಟ್ಟಡ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

Namma Sindhanuru Click For Breaking & Local News

60 ಹಾಸಿಗೆಯ ಆಸ್ಪತ್ರೆ
ವೆಂಕಟರಾವ್‌ ನಾಡಗೌಡ ಅವರು ಶಾಸಕರಾಗಿದ್ದಾಗ 2020, ಏಪ್ರಿಲ್‌ ವೇಳೆಯಲ್ಲಿ ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತ್ತು. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿತ್ತು. 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದ್ದು, 3 ಜನ ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ. ಆಸ್ಪತ್ರೆ ಮಂಜೂರಾಗಿ 4 ವರ್ಷಗಳು ಗತಿಸಿದರೂ ಇನ್ನೂ ಆಸ್ಪತ್ರೆ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ !
ನಗರದ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಗೆ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಹೆರಿಗೆ ಸೇರಿದಂತೆ ಇನ್ನಿತರೆ ಶಸ್ತ್ರಚಿಕಿತ್ಸೆಗಳಿಗೆ ವೈದ್ಯರು ಕೊಠಡಿಗಳನ್ನು ಹೊಂದಿಸುವುದೇ ಸಮಸ್ಯೆಯಾಗಿದೆ. ಕೆಲವೊಂದು ಬಾರಿ ಆಸ್ಪತ್ರೆಗೆ ನೂರಾರು ರೋಗಿಗಳು ಬರುವುದರಿಂದ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ರೋಗಿಗಳಿಗೆ ತಕ್ಕಂತೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸಲಕರಣೆ, ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳ ಅಭಾವದಿಂದಾಗಿ ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ದಿನವೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ.

Namma Sindhanuru Click For Breaking & Local News

ವಾತಾವರಣದ ವೈಪರೀತ್ಯ, ಹೆಚ್ಚಿದ ರೋಗಿಗಳ ಸಂಖ್ಯೆ
ಕಳೆದ ಒಂದೂವರೆ ತಿಂಗಳಿನಿಂದ ದಿನಬಿಟ್ಟ ದಿನ ಮಳೆ ಬರುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಜ್ವರ, ಶೀತ, ವೈರಲ್‌ ಫೀವರ್‌, ಮಲೇರಿಯಾ ಹಾಗೂ ಶಂಕಿತ ಡೆಂಗೆ ಪ್ರಕರಗಳು ಹೆಚ್ಚುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.


Spread the love

Leave a Reply

Your email address will not be published. Required fields are marked *