ನಮ್ಮ ಸಿಂಧನೂರು, ಸೆಪ್ಟೆಂಬರ್ 07
ನಗರದ ಸರ್ಕಾರಿ ಆಸ್ಪತ್ರೆಯ ಬಗ್ಗೆ ದಿನದಿಂದ ದಿನಕ್ಕೆ ಸಾರ್ವಜನಿಕರು ದೂರುಗಳು ಹೆಚ್ಚುತ್ತಿದ್ದು, ನಮ್ಮ ಕರ್ನಾಟಕ ಸೇನೆಯಿಂದ ಇತ್ತೀಚೆಗೆ ದಿಢೀರ್ ಪ್ರತಿಭಟನೆ ನಡೆಸಿ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಶುಕ್ರವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಎಸಿ, ತಹಸೀಲ್ದಾರ್, ಆಸ್ಪತ್ರೆ ಸಿಎಂಒ, ಟಿಎಚ್‌ಒ, ಡಿವೈಎಸ್‌ಪಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಯ ಸಭೆ ನಡೆಸಿದರು.
ವೈದ್ಯರು ಸಮಯಪಾಲನೆ ಮಾಡದಿರುವುದು, ಮೇಲಿಂದ ಮೇಲೆ ಗೈರುಹಾಜರಾಗುವುದು, ರೋಗಿಗಳಿಗೆ ಸಮಪರ್ಕವಾಗಿ ಚಿಕಿತ್ಸೆ ದೊರೆಯದಿರುವುದು, ವೈಜ್ಞಾನಿಕ ಉಪಕರಣಗಳ ಕೊರತೆ, ಆರೋಗ್ಯ ಸಿಬ್ಬಂದಿ, ವೈದ್ಯರ ಕೊರತೆ, ಅಸ್ವಚ್ಛತೆ, ಗರ್ಭಿಣಿಯರು, ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ದೊರೆಯದಿರುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಧ್ವನಿ ಎತ್ತುತ್ತಿದ್ದು, ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ದಿಢೀರ್ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯರು, ಸಿಬ್ಬಂದಿಯಿಂದ ಮಾಹಿತಿ:
ಆಸ್ಪತ್ರೆಯಲ್ಲಿ ಕೆಲವೊತ್ತು ನಡೆದ ಸಭೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ಹಾಗೂ ಉದ್ಯೋಗಿಗಳಿಂದ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಯಿತು. ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಯವರಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಲಿಂಗಸುಗೂರು ಉಪ ವಿಭಾಗ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲ್‌ಶೆಟ್ಟಿ, ತಹಸೀಲ್ದಾರ್ ಅರುಣ್‌ಕುಮಾರ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಡಿವೈಎಸ್‌ಪಿ, ಸರ್ಕಾರಿ ಆಸ್ಪತ್ರೆ ಸಿಎಂಒ ಡಾ.ಹನುಮಂತರೆಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ.ಅಯ್ಯನಗೌಡ, ಜಿಲ್ಲಾ ಕ್ಷಯ ರೋಗ ಅಧೀಕಾರಿ ಡಾ.ಜಾಕೀರ್ ಹುಸೇನ್ ಸೇರಿದಂತೆ ಆರೋಗ್ಯ ಸಿಬ್ಬಂದಿಯವರು ಇದ್ದರು