ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 07
ಹೆಜ್ಜೆ ಹೆಜ್ಜೆಗೂ ಗುಂಡಿಗಳು, ಮಳೆ ನೀರು ನಿಂತು ಚೆಲ್ಲಾಪಿಲ್ಲಿಯಾದ ಕಂಕರ್, ತೋಪೆದ್ದುಹೋದ ಡಾಂಬರ್, ತಡೆಗೋಡೆಯಿಲ್ಲದ ಸಂಪರ್ಕ ಸೇತುವೆ ಇದು ತಾಲೂಕಿನ ಅರಳಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಧ್ವಾನ ಸ್ಥಿತಿ.
ದಿನವೂ ಕೆಲಸ ಕಾರ್ಯಗಳಿಗೆ ಪಟ್ಟಣ, ನಗರ ಪ್ರದೇಶಗಳಿಗೆ ಈ ಗ್ರಾಮದಲ್ಲಿ ನೂರಾರು ಜನರು ಸಂಚರಿಸುತ್ತಾರೆ. ರಸ್ತೆಯ ಅಧ್ವಾನ ಸ್ಥಿತಿಯಿಂದಾಗಿ ಗ್ರಾಮಸ್ಥರು ಯಾತನೆ ಅನುಭವಿಸುತ್ತಿದ್ದಾರೆ. ಸಿಂಧನೂರು-ಕುಷ್ಟಗಿ ಮಾರ್ಗದ ಮುಖ್ಯರಸ್ತೆಯ ಕ್ರಾಸ್ನಿಂದ ಗ್ರಾಮ ಒಂದೂವರೆ ಕಿ.ಮೀ ಅಂತರದಲ್ಲಿದ್ದು. ಈ ಒಂದೂವರೆ ಕಿ.ಮೀ ಅಂತರದ ರಸ್ತೆ ಸಂಪೂರ್ಣ ದಿವಾಳಿ ಎದ್ದ ಪರಿಣಾಮ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಇನ್ನು ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
‘ಒಂದೂವರೆ ಕಿ.ಮೀ ಹೋಗೋದ್ರಾಕ ಕುತ್ತಿಗಿ ಬರ್ತೈತ್ರಿ’
“ಸಿಂಧನೂರಿನಿಂದ ಕ್ರಾಸ್ವರೆಗೆ ಬರೋದ ಸುಲಭ, ಅಲ್ಲಿಂದ ಊರಿಗೆ ತಲುಪೋದು ತುಂಬಾ ಕಷ್ಟ ಆಗೈತ್ರಿ. ರೋಡೆಲ್ಲಾ ಕೆಟ್ಟು ದಿವಾಳಿ ಎದ್ದೈತಿ. ಜಾರಿ ಬಿದ್ರ ಗದ್ದ್ಯಾಕ ಲಗಾಟಿ ಹೊಡಿತೀವಿ. ಟಂಟಂ, ಆಟೋದವರು ಗಾಡಿ ಹೊಡ್ಯಾಕ ಅಂಜಿಕೆಂತಾರ. ಇನ್ನು ಸೈಕಲ್ ಮೋಟ್ರದಾಗ ಹೋಗ್ಬೇಕಂದ್ರ ದಕ್ಕಡಿ. ಸರೀಗೆ ಸರ್ಕಾರಿ ಬಸ್ಸು ಇಲ್ಲ. ಈ ರೋಡಿನ್ಯಾಗ ನಡದು ನಡದು ಸಾಕಾಗೈತಿ” ಎಂದು ಗ್ರಾಮಸ್ಥರೊಬ್ಬರು ಅಳಲುತೋಡಿಕೊಂಡಿದ್ದಾರೆ.
ತಡೆಗೋಡೆಯಿಲ್ಲದ ಸಂಪರ್ಕ ಸೇತುವೆ
ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಹೊಲಗಾಲುವೆಯೊಂದು ಹಾದುಹೋಗಿದ್ದು, ಇದಕ್ಕೆ ನಿರ್ಮಿಸಿದ ಸಂಪರ್ಕ ಸೇತುವೆಯ ತಡೆಗೋಡೆ ಉರುಳಿಬಿದ್ದು ಬಹಳ ದಿನಗಳೇ ಕಳೆದರೂ ಇಲ್ಲಿಯವರೆಗೂ ತಡೆಗೋಡೆ ನಿರ್ಮಿಸಿಲ್ಲ. ರಾತ್ರಿವೇಳೆ ಅಪ್ಪಿತಪ್ಪಿ ಸ್ವಲ್ಪ ಯಾಮಾರಿದರೆ ಕಾಲುವೆಗೆ ಬೀಳುವುದು ಗ್ಯಾರಂಟಿ ಎಂದು ಗ್ರಾಮಸ್ಥರು ದೂರುತ್ತಾರೆ.
ತುರ್ತು ಆಸ್ಪತ್ರೆಗೆ ಹೋಗಲು ಸಂಕಟ
ಗರ್ಭಿಣಿಯರು, ಬಾಣಂತಿಯರು, ವೃದ್ಧರು, ವಿಕಲಚೇತನರು ಹಾಗೂ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಈ ಗ್ರಾಮಸ್ಥರು ಭಯ, ಆತಂಕ ಎದುರಿಸುತ್ತಿದ್ದಾರೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು-ದಿನ್ನೆಗಳಿರುವುದರಿಂದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕಳೆದ ಹಲವು ದಿನಗಳಿಂದ ಮೇಲಿಂದ ಮೇಲೆ ಮಳೆಯಾಗಿದ್ದರಿಂದ, ರಸ್ತೆ ಇನ್ನಷ್ಟು ಕೆಟ್ಟುಹೋಗಿದೆ.