ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 03
ಮಂಗಳವಾರ ಸಂಜೆ 5 ಗಂಟೆ ಸುಮಾರು ನಗರದಲ್ಲಿ ಸುರಿದ ಮಳೆಯಿಂದಾಗಿ ಗಂಗಾವತಿ ಮಾರ್ಗದ ರಸ್ತೆಯಲ್ಲಿರುವ ಎಕ್ಸಿಸ್‌ಬ್ಯಾಂಕ್, ವಿಸ್ಟೈಲೋ ಹಾಗೂ ಕಾನಿಹಾಳ ಪೆಟ್ರೋಲ್ ಬಂಕ್ ಮುಂಬದಿಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಚಾಲಕರು ಪರದಾಡುವಂತಾಯಿತು. ಚರಂಡಿ ನೀರು ಹಾಗೂ ಮಳೆ ನೀರು ಕ್ಷಣಾರ್ಧದಲ್ಲಿ ರಸ್ತೆ ಮೇಲೆ ಹರಿದು ಕಾಲುವೆಯಂತೆ ಭಾಸವಾಯಿತು.
ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವುದಲ್ಲದೇ ಅಲ್ಲಲ್ಲಿ ಚರಂಡಿಗಳು ಅಧ್ವಾನ ಸ್ಥಿತಿಗೆ ತಲುಪಿದ ಪರಿಣಾಮ ಸಣ್ಣ ಮಳೆಯಾದರೆ ಸಾಕು ಹೈವೇ ರೋಡಿಗೆ ನೀರು ಹರಿಯುತ್ತದೆ. ಪ್ರಮುಖ ರಸ್ತೆಯ ಗತಿಯೇ ಹೀಗಾದರೆ ಇನ್ನು ವಾರ್ಡ್ ಗಳ ಒಳ ರಸ್ತೆಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎಕ್ಸಿಸ್ ಬ್ಯಾಂಕ್ ಬಳಿ ಕಳೆದ ಹಲವು ದಿನಗಳಿಂದ ಚರಂಡಿ ಕುಸಿದಿದ್ದು, ಇನ್ನೂ ತೋಟಗಾರಿಕೆ ಇಲಾಖೆ ಸೇರಿದಂತೆ ಹೆದ್ದಾರಿ ಬದಿಯ ಒಳ ಚರಂಡಿಗಳು ಮಣ್ಣಿನಿಂದ ಮುಚ್ಚಿದ ಕಾರಣ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಹೆದ್ದಾರಿ ಪ್ರಾಧಿಕಾರದವರು, ನಗರಸಭೆಯವರು ಮತ್ತು ಲೋಕೋಪಯೋಗಿ ಇಲಾಖೆಯವರು ದುರಸ್ತಿಕಾರ್ಯಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಮಳೆ ಬಂದ್ರೆ ನೋಡ್ರಿ ನಮ್ಮ ಫಜೀತಿ ಹೇಳಂಗಿಲ್ಲ ”
“ಹೆಸರಿಗಷ್ಟೇ ಸಿಂಧನೂರು ನಗರ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ರಸ್ತೆಗೆ ಚರಂಡಿ ನೀರಿನ ಹೊಂಡಗಳು !! ಇನ್ನು ಓಣಿಯ ಒಳ ರಸ್ತೆಗಳಲ್ಲಿ ಕಳೆದ ತಿಂಗಳಿಂದ ಕಾಲಿಡಲು ಹೆದರಿಕೆ ಆಗುತ್ತಿದೆ. ಡಾಂಬರ್ ರೋಡಿನಲ್ಲೇ ಚರಂಡಿ ನೀರು ಈಪರಿ ಹರಿದರೆ ಇನ್ನು ಒಳ ರಸ್ತೆಗಳಲ್ಲಿ ಅದೇಗೆ ಇರಬಹುದು. ಕೂಡಲೇ ಕುಸಿದಬಿದ್ದ ಒಳಚರಂಡಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ದೊಡ್ಡ ಮಳೆ ಬಂದರೆ ಬೈಕ್‌ಗಳನ್ನು ಚಲಾಯಿಸುವುದು ಕಷ್ಟಸಾಧ್ಯವಾಗುತ್ತದೆ. ಅಲ್ಲದೇ ಇದರಿಂದಾಗಿ ನಮ್ಮ ವ್ಯಾಪಾರಕ್ಕೂ ಸಮಸ್ಯೆ ಆಗುತ್ತಿದೆ” ಎಂದು ಅಂಗಡಿಯ ವ್ಯಾಪಾರಿಯೊಬ್ಬರು ಹೇಳುತ್ತಾರೆ.