ನಮ್ಮ ಸಿಂಧನೂರು, ಆಗಸ್ಟ್ 24
ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಮುದಾಯದವರು ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಮುದಾಯದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿರುವ ಕೋಟೆ ಈರಣ್ಣ ದೇವಸ್ಥಾನ ಹಾಗೂ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪಗಳು ಬಹಳಷ್ಟು ಚಿಕ್ಕದಾಗಿದ್ದು, ಸಭೆ-ಸಮಾರಂಭ ಹಾಗೂ ಮದುವೆ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ಅನನುಕೂಲ ಉಂಟಾಗುತ್ತಿದೆ. ಜಾಸ್ತಿ ಜನರು ಬಂದಾಗ ನಿಭಾಯಿಸುವುದು ಕಷ್ಟಸಾಧ್ಯವಾಗಿದ್ದು, ಇನ್ನು ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಮಾರಂಭಗಳಿಗೆ ಬಂದ ಜನರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪದ ಅಗತ್ಯತೆ ಇದ್ದು, ಆದರೆ ಇಲ್ಲಿಯವರೆಗೂ ನಿರ್ಮಾಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ವೀರಶೈವ ಲಿಂಗಾಯತ ಸಮುದಾಯದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಲಸೆ ಸಮುದಾಯಗಳ ಕಲ್ಯಾಣ ಮಂಟಪ
ಅಂತಾರಾಜ್ಯದಿಂದ ವಲಸೆ ಬಂದು ಇಲ್ಲಿ ನೆಲೆಯೂರಿರುವ ಹಲವು ಸಮುದಾಯಗಳೇ, ಸಭೆ, ಸಮಾರಂಭ, ಮದುವೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತವಾದ ಕಲ್ಯಾಣ ಮಂಟಪಗಳನ್ನು ಕಟ್ಟಿಸಿದ್ದಾರೆ. ಆದರೆ ಇಲ್ಲಿ ಸ್ಥಳೀಯವಾಗಿ ಜಾಗ ಮತ್ತು ಸಂಪನ್ಮೂಲಗಳ ಅನಕೂಲತೆಗಳಿದ್ದರೂ ಕಲ್ಯಾಣ ಮಂಟಪ ಕಟ್ಟಿಸಲು ನಮ್ಮ ಸಮುದಾಯದ ಮುಖಂಡರಿಗೆ ಇಲ್ಲಿಯವರೆಗೂ ಆಗಿಲ್ಲ. ಇದರಿಂದ ಮದುವೆ ಸೀಜನ್ನಲ್ಲಿ ಸಮುದಾಯದ ಜನರು ಕಲ್ಯಾಣ ಮಂಟಪಕ್ಕಾಗಿ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.
“ಚುನಾವಣೆ ಬಂದಾಗಲಷ್ಟೇ ಇವರಿಗೆ ಸಮುದಾಯದ ಜನರು ನೆನಪಾಗುತ್ತಾರೆ”
ಮೂರು ಪಕ್ಷದಲ್ಲಿರುವ ಸಮುದಾಯದ ರಾಜಕಾರಣಿಗಳಿಗೆ ಚುನಾವಣೆ ಬಂದಾಗಲಷ್ಟೇ ಜನರು ನೆನಪಾಗುತ್ತಾರೆ. ಅಲ್ಲಿಯವರೆಗೂ ಇವರು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಸಮುದಾಯದ ಕಲ್ಯಾಣ ಮಂಟಪ ಕಟ್ಟಿಸಲು ನಿರ್ಲಕ್ಷö್ಯ ತೋರುವ ಇವರು ಖಾಸಗಿಯಾಗಿ ದೊಡ್ಡ ದೊಡ್ಡ ಕಲ್ಯಾಣ ಮಂಟಪ ಕಟ್ಟಿಸಿ ಬಾಡಿಗೆ ಕೊಡುವುದರಲ್ಲಿ ನಿಸ್ಸೀಮರು. ಆದರೆ ಸಮುದಾಯದ ಹಿತದೃಷ್ಟಿಯಿಂದ ಕಲ್ಯಾಣ ಮಂಟಪ ಕಟ್ಟಿಸುವಲ್ಲಿ ಮಾತ್ರ ಸಂಪೂರ್ಣ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಹೆಸರೇಳಲಿಚ್ಚಿಸದ ಸಮುದಾಯದ ಮುಖಂಡರೊಬ್ಬರು ಹೇಳಿದರು.
“ಕಲ್ಯಾಣ ಮಂಟಪಕ್ಕೆ ಯಾರು ಅನುದಾನ ಕೊಟ್ಟಿದ್ದಾರೋ ಗೊತ್ತಾಗುತ್ತಿಲ್ಲ”
“ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ತಾವು ವೀರಶೈವ ಕಲ್ಯಾಣ ಮಂಟಪಕ್ಕೆ ಅನುದಾನ ಒದಗಿಸಿದ್ದಾಗಿ ಹೇಳುತ್ತಾರೆ. ಇನ್ನು ಹಾಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ತಾವು 4 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದಾಗ್ಯೂ ಹೇಳುತ್ತಾರೆ. ಆದರೆ ಕಲ್ಯಾಣ ಮಂಟಪ ಮಾತ್ರ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಕಳೆದ ಹತ್ತು ವರ್ಷಗಳಿಂದ ಹೀಗೆ ಹೇಳುತ್ತಲೇ ಇಬ್ಬರೂ ರಾಜಕಾರಣಿಗಳು ಕಾಲಹರಣ ಮಾಡುತ್ತಿದ್ದಾರೆ. ಇನ್ನು ಯಾವ ವರ್ಷಕ್ಕೆ ಕಲ್ಯಾಣ ಮಂಟಪ ಪೂರ್ಣಗೊಳ್ಳುವುದೋ ದೇವರಿಗೆ ಗೊತ್ತು” ಎಂದು ಸಮುದಾಯದ ವ್ಯಕ್ತಿಯೊಬ್ಬರು ಹೇಳುತ್ತಾರೆ.