ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 20
ನಗರದ ವಾರ್ಡ್ ನಂ.14ರ ವ್ಯಾಪ್ತಿಯಲ್ಲಿರುವ ಗಂಗಾನಗರ ಸಂಪರ್ಕ ರಸ್ತೆ ಮಳೆನೀರಿನಿಂದಾಗಿ ಅಧ್ವಾನ ಸ್ಥಿತಿಗೆ ತಲುಪಿದ್ದು, ಇಲ್ಲಿ ಸಸಿ ನಾಟಿ ಮಾಡುವುದಷ್ಟೇ ಬಾಕಿ ಉಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಗೆ ರಸ್ತೆ ಸಂಪೂರ್ಣ ಹೊಂಡವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ನಡೆದಾಡಲು ಪಡಿಪಾಟಲು ಅನುಭವಿಸುತ್ತಿದ್ದಾರೆ. ಇನ್ನು ದ್ವಿಚಕ್ರವಾಹನ ಸವಾರರು, ಆಟೋದವರು ಹಾಗೂ ಶಾಲಾ ವಾಹನಗಳ ಚಾಲಕರು ಈ ಮಾರ್ಗದಲ್ಲಿ ವಾಹನ ಚಲಾಯಿಸಲು ಬೆಚ್ಚಿ ಬೀಳುತ್ತಿದ್ದಾರೆ.
ಗಂಗಾವತಿ ಮಾರ್ಗದ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆ, ವಿರುಪಾಪುರ ಗ್ರಾಮದ ಸಂಪರ್ಕ ರಸ್ತೆಗೆ ಕೂಡುತ್ತದೆ. ಇಲ್ಲಿಯವರೆಗೂ ಈ ರಸ್ತೆಯ ಶಾಶ್ವತ ದುರಸ್ತಿಗೆ ಮುಂದಾಗದಿರುವುದೇ ವಾರ್ಡ್ನ ನಿವಾಸಿಗಳ ದೈನಂದಿನ ಓಡಾಟಕ್ಕೆ ಮುಳುವಾಗಿದೆ. ಅಲ್ಲಲ್ಲಿ ಸಿಸಿ ರಸ್ತೆ, ಅರೆಬರೆ ಡಾಂಬರ್ ಹೀಗೆ ಮನಸೋಇಚ್ಛೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡು, ಅರ್ಧಕ್ಕೆ ಕೈಬಿಡಲಾಗಿದ್ದು, ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ.
ಮಳೆಗಾಲದಲ್ಲಿ ಗೊಜ್ಜಲು, ಬೇಸಿಗೆಯಲ್ಲಿ ಧೂಳು !
ಗಂಗಾನಗರದ ರಸ್ತೆ ಮಳೆಗಾಲದಲ್ಲಿ ವಿಪರೀತ ಗೊಜ್ಜಲಿನಿಂದ ಕೂಡಿದರೆ, ಇನ್ನು ಬೇಸಿಗೆಯಲ್ಲಿ ಈ ಮಾರ್ಗದಲ್ಲಿ ಧೂಳೋ ಧೂಳು !! ಹೆಜ್ಜೆ ಹೆಜ್ಜೆಗೂ ಸಾಲು ಸಾಲು ತಗ್ಗು-ದಿನ್ನೆಗಳು, ಆಯ ತಪ್ಪಿದರೆ ಜಾರಿ ಬೀಳುವುದು ಗ್ಯಾರಂಟಿ. ಈ ವಾರ್ಡ್ನಲ್ಲಿ ವಾಸಿಸುವವರು ವರ್ಷವಿಡೀ ಕಿರಿಕಿರಿ ಅನುಭವಿಸುವುದು ತಪ್ಪಿಲ್ಲ ಎಂದು ನಿವಾಸಿಯೊಬ್ಬರು ಆಪಾದಿಸುತ್ತಾರೆ.
“ಸಾಲಿ ಹುಡ್ರು, ಮುದುಕ್ರು ಹೆಂಗ್ ಅಡ್ಯಾಡಬೇಕ್ರಿ ಈ ದಾರ್ಯಾಗ”
ಸಣ್ ಮಳಿ ಬಂತಂದ್ರ ದಾರಿ ತುಂಬ ನೀರು ನಿಲ್ತಾವ. ಮುದುಕ್ರು, ಸಾಲಿ ಹುಡ್ರು ದಿನಾ ಹೊಂಡದಾಗ ನಡಕಂತ ಹೋಗಂಗ ಆಗೇತಿ. ರೋಡು ತುಂಬ ರಾಡಿ ನೋಡಿದ್ರ ಎದಿ ಝಲ್ ಅಂತೈತಿ. ಒಂದೇ ಸವನೇ ನಾಕಾರು ವರ್ಷದಿಂದ ರೋಡು ಮಾಡ್ಸಿ ಅಂತ ಹೇಳಿಕೆಂತ ಬಂದ್ರೂ ಇಲ್ಲಿವರೆಗೂ ಏನು ಆಗಿಲ್ಲ, ನಮ್ಮ ತಿಪ್ಲ ಯಾರ್ ಕೇಳ್ತಾರ” ಎಂದು ವಾರ್ಡ್ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ