ರಾಯಚೂರು/ಮಾನ್ವಿ : ಮೈಮರೆತ ನೀರಾವರಿ ನಿಗಮ, ಸಂಸದ, ಶಾಸಕರು ! ಡ್ಯಾಂ ತುಂಬಿ ತುಳಿಕಿದರೂ ನೀರಿಗಾಗಿ ಕೆಳ ಭಾಗದ ರೈತರ ಪರದಾಟ !!

Spread the love

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಆಗಸ್ಟ್ 5

ತುಂಗಭದ್ರಾ ಜಲಾಶಯ ತುಂಬಿ ತುಳಿಕಿ, ದಿನವೂ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿ ಮೂಲಕ ಹರಿದುಹೋಗುತ್ತಿದ್ದರೂ, ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಜಮೀನಿಗೆ ನೀರು ಹರಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರಸ್ತೆ ಸಂಚಾರ ತಡೆಯಂತಹ ಹೋರಾಟಕ್ಕೆ ಮುಂದಾಗಿರುವುದು ಸರ್ಕಾರ, ಜಲ ಸಂಪನ್ಮೂಲ ಇಲಾಖೆ, ನೀರಾವರಿ ನಿಗಮ ಸೇರಿದಂತೆ ತಳ ಹಂತದ ಅಧಿಕಾರಿಗಳ ಬೇಜವಾಬ್ದಾರಿಗೆ ಜ್ವಲಂತ ಸಾಕ್ಷಿಯಾಗಿದೆ.
‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾಯಿ ತೋಡುವುದು’ ಎನ್ನುವ ನಾಣ್ನುಡಿಯಂತೆ ಜಿಲ್ಲಾಡಳಿತ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಶಾಸಕರು, ಸಂಸದರ ಮುಂದಾಲೋಚನೆ ಕೊರತೆ ಮತ್ತು ರೈತರ ಬಗೆಗಿನ ಕಾಳಜಿ ಕೊರತೆಯಿಂದಾಗಿ, ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಿ ಪರಿಹಾರೋಪಾಯ ಕಂಡುಹಿಡಿಯುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಾಳಿರುವುದೇ ಪ್ರತಿ ಬಾರಿಯೂ ಸಮಸ್ಯೆ ಬಿಗಡಾಯಿಸಲು ಕಾರಣ ಎಂದು ಸಂಘಟನೆಯೊಂದರ ಮುಖ್ಯಸ್ಥರು ವಿಶ್ಲೇಷಿಸುತ್ತಾರೆ. ಕಾಲುವೆಗೆ ನೀರು ಹರಿಸಿ 15 ದಿನಗಳಾದರೂ ಇಲ್ಲಿಯವರೆಗೂ ಕೆಳ ಭಾಗದ ಜಮೀನಿನ ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ.
ರಸ್ತೆ ಸಂಚಾರ ತಡೆದು ರೈತ ಸಂಘ ಪ್ರತಿಭಟನೆ
ಜಲಾಶಯ ತುಂಬಿದರೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಉಪ ಕಾಲುವೆಗಳಿಗೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ದೂರಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ನೇತೃತ್ವದಲ್ಲಿ ಮಾನ್ವಿ ತಾಲೂಕಿನ ನೀರಮಾನ್ವಿ ಕ್ರಾಸ್ ಬಳಿ ಭಾನುವಾರ ರಸ್ತೆ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ನೀರಾವರಿ ನಿಗಮದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಕಾಲುವೆಗೆ ನೀರು ಬರುತ್ತಿಲ್ಲ, ರೈತರ ಆರೋಪ ಏನು ?
ತುಂಗಭದ್ರಾ ಎಡದಂಡೆ ಮುಖು ಕಾಲುವೆಯ ಮೂಲ್ ನಂಬರ್ 69 ಹಾಗೂ 104ರಲ್ಲಿ ನೀರಿನ ಗೇಜ್ (ಪ್ರಮಾಣ) ನಿಗದಿತ ಮಟ್ಟ ಕಾಯ್ದುಕೊಂಡಿಲ್ಲ. ಉಪ ಕಾಲುವೆಗಳಾದ ನಂ.76, 82, 85, 89, 90 ಹಾಗೂ 92ನೇ ಕಾಲುವೆಗಳಲ್ಲಿನ ಹೂಳನ್ನು ತೆಗೆದುಹಾಕದಿರುವುದು, ವಾರಾಬಂಧಿಯ ಪ್ರಕಾರ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸದೇ ನೀರಾವರಿ ನಿಗಮ ಬೇಜವಾಬ್ದಾರಿ ವಹಿಸಿದ ಬಗ್ಗೆ ರೈತ ಸಂಘ ಹಾಗೂ ಕಾಲುವೆ ವ್ಯಾಪ್ತಿಯ ರೈತರು ಆರೋಪಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ , ಶಾಸಕ, ಸಂಸದರ ಮುಂದಾಲೋಚನೆ ಕೊರತೆ ?
ಮಲೆನಾಡ ಪ್ರದೇಶ ಹಾಗೂ ಶಿವಮೊಗ್ಗ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈ ಬಾರಿ ಜಲಾಶಯ ಬಹುಬೇಗನೆ ತುಂಬಿದ್ದು, ವ್ಯಾಪಕ ಪ್ರಮಾಣದ ನೀರು ನದಿಗೆ ದಿನವೂ ಹರಿದು ಹೋಗುತ್ತಿದೆ. ಆದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಜಮೀನುಗಳಿಗೆ ನೀರು ಹರಿಸುವುದಕ್ಕೆ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿರುವುದು ನೀರಾವರಿ ನಿಗಮ ಮತ್ತು ಇಲಾಖೆಯ ಅಧಿಕಾರಿಗಳ ಮುಂದಾಲೋಚನೆ ಕೊರತೆಗೆ ಸಾಕ್ಷಿಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ, ಜಲಾಶಯಕ್ಕೆ ವ್ಯಾಪಕ ಪ್ರಮಾಣದ ನೀರು ಹರಿದುಬರುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕಿಂಚಿತ್ತೂ ಗಮನ ಕೊಡದೇ ಇರುವುದು ಇಂತಹ ಪರಿಸ್ಥಿತಿಗೆ ಕಾರಣ ಎಂದು ರೈತ ಮುಖಂಡರು ದೂರುತ್ತಾರೆ.


Spread the love

Leave a Reply

Your email address will not be published. Required fields are marked *