ಜನರ ನಿರೀಕ್ಷೆ ಹುಸಿಗೊಳಿಸಿದ ಜನವಿರೋಧಿ ಬಜೆಟ್ : ಸಿಪಿಐ

Spread the love

ನಮ್ಮ ಸಿಂಧನೂರು, ಜುಲೈ 24
ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯಲ್ಲಿ ಕೇಂದ್ರ ವಿತ್ತ ಸಚಿವೆ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಹೊಟ್ಟೆಗೆ ಹಿಟ್ಟು ನೀಡದೇ, ಜುಟ್ಟಿಗೆ ಮಲ್ಲಿಗೆ ಮುಡಿಸುವ ಪ್ರಯತ್ನದಂತಿದೆ. ಅಧಿಕಾರದ ಗದ್ದುಗೆ ಹಿಡಿಯಲು ಸಹಕರಿಸಿ ನಿತೀಶ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರನ್ನು ಸಂತ್ರಪ್ತಗೊಳಿಸುವ ಹಿನ್ನೆಲೆಯಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ರಾಜಕೀಯ ಪ್ರೇರಿತವಾದ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯ ಬಾಷುಮಿಯಾ ಅವರು ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಐದು ಜನ ಸಚಿವರಿದ್ದರೂ ಸಹ ಕರ್ನಾಟಕಕ್ಕೆ ವಿಶೇಷ ಅನುದಾನ ತರದೇ ಇರುವುದು ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದೆ. ಮೋಬೈಲ್,ಟಿವಿ, ಬೆಳ್ಳಿ, ಬಂಗಾರದ ಬೆಲೆಗಳನ್ನು ಇಳಿಸಲು ಆದ್ಯತೆ ನೀಡಿರುವ ಕೇಂದ್ರ ಸರಕಾರ ಜನಸಾಮಾನ್ಯರು ದಿನನಿತ್ಯ ಬಳಸುವ ಜೀವನದ ಅಗತ್ಯ ವಸ್ತುಗಳ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಅವರು ಟೀಕಿಸಿದ್ದಾರೆ.
ʼವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವಲ್ಲಿ ಕೇಂದ್ರ ವಿಫಲʼ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ಆಡಳಿತ ನಡೆಸಿದ ಕೇಂದ್ರ ಸರಕಾರ ನಿರುದ್ಯೋಗ ನಿವಾರಣೆ ಮಾಡಲು ವಿಫಲವಾಗಿದೆ. 3ನೇ ಅವಧಿಯಲ್ಲಿ ಈಗ ಮುಂಬರುವ 5 ವರ್ಷಗಳಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳುವ ಮೂಲಕ ಈಗ ಮತ್ತೊಮ್ಮೆ ದೇಶದ ನಿರುದ್ಯೋಗಿ ಯುವಜನರ ಮೂಗಿಗೆ ತುಪ್ಪ ಸವರಲು ಮುಂದಾಗಿದೆ ಎಂದು ಆಪಾದಿಸಿದ್ದಾರೆ.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯಾವಾಗ ?
ನಳಂದ, ವಿಷ್ಣುಪಾದ, ರಾಜಗೀರ್, ಮಹಾಬೋದಿ ದೇಗುಲ ಕಾರಿಡಾರ್ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವ ಮೋದಿ ಸರಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲ ಘೋಷಿಸದೇ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕೋಟ್ಯಾಂತರ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವ ಬಗ್ಗೆ ಪ್ರಸ್ತಾಪ ಮಾಡದೇ ರೈತ, ಕಾರ್ಮಿಕ ಸಮುದಾಯವನ್ನು ಕಡೆಗಣಿಸಿದೆ ಎಂದು ದೂರಿದ್ದಾರೆ.
ಏಮ್ಸ್‌ಗಾಗಿ 800 ದಿನಗಳ ಹೋರಾಟಕ್ಕೆ ಮನ್ನಣೆ ಇಲ್ಲವೇ ?
ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಾಗಿ (ಏಮ್ಸ್‌) ಗಾಗಿ ಕಳೆದ 800 ದಿನಗಳಿಂದ ನಿರಂತರ ಧರಣಿ ನಡೆಯುತ್ತಿದ್ದರೂ ಕೇಂದ್ರ ಸರಕಾರ ಚಕಾರ ಎತ್ತದೆ ಇರುವುದು ದುರಂತ. ಎಡದೊರೆ ನಾಡಾದ ರಾಯಚೂರು ಜಿಲ್ಲೆಗೆ ಸಂಪೂರ್ಣ ನೀರಾವರಿಗೆ ಆದ್ಯತೆ ನೀಡದಿರುವುದು, ಜಿಲ್ಲೆಯ ಜನರ ಬಗೆಗಿನ ವಿರೋಧಿ ಧೋರಣೆಯಾಗಿದೆ. ಒಟ್ಟಾರೆಯಾಗಿ ಜನಸಾಮಾನ್ಯರ ನೆರವಿಗೆ ಬೇಕಾದ ಯಾವ ನೀತಿ, ಯೋಜನೆಗಳಿಲ್ಲದ ಹುಸಿ ಗೋಪುರ ಕಟ್ಟುವ ಕೇಂದ್ರ ಸರಕಾರದ ಈ ಬಜೆಟ್ ಜನವಿರೋಧಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.


Spread the love

Leave a Reply

Your email address will not be published. Required fields are marked *