(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 16
ಶಿವಮೊಗ್ಗ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಜುಲೈ 16ರಂದು ಆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಿದ ಕಾರಣ ತುಂಗಾ ಜಲಾಶಯ ಈಗಾಗಲೇ ತುಂಬಿದ್ದು, ಒಳಹರಿವು ವ್ಯಾಪಕ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಗಾಜನೂರಿನ ತುಂಗಾ ಅಣೆಕಟ್ಟೆಗೆ 61,757 ಕ್ಯೂಸೆಕ್ ಒಳಹರಿವು ಇದೆ ಎಂದು ಹೇಳಲಾಗುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಡ್ಯಾಂ ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನೀರು ನದಿಯ ಮೂಲಕ ತುಂಗಭದ್ರಾ ಅಣೆಕಟ್ಟೆ ತಲುಪಲಿದೆ ಎನ್ನುವ ಮಾಹಿತಿ ಇದೆ. ಇನ್ನು ಭದ್ರಾ ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಜಾಸ್ತಿಯಾಗಿದ್ದು, ಡ್ಯಾಂನ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ.
ಟಿಬಿ ಡ್ಯಾಂನಲ್ಲಿ 35.47 ಟಿಎಂಸಿ ನೀರು
ತುಂಗಭದ್ರಾ ಜಲಾಶಯದಲ್ಲಿ 16-07-2024 ಮಂಗಳವಾರದಂದು 35.47 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಿಂದ 211 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 9.51 ಟಿಎಂಸಿ ನೀರು ಸಂಗ್ರಹವಿದ್ದರೆ, 5,955 ಕ್ಯೂಸೆಕ್ ನೀರು ಒಳಹರಿವಿತ್ತು, ಹಾಗಾಗಿ ಕಳೆದ ವರ್ಷಕ್ಕಿಂತಲೂ ಈ ಬಾರಿ 25.96 ಟಿಎಂಸಿ ನೀರು ಹೆಚ್ಚು ಸಂಗ್ರಹ ದಾಖಲಾಗಿರುವುದು ರೈತರ ಹರ್ಷಕ್ಕೆ ಕಾರಣವಾಗಿದೆ.
ಐಸಿಸಿ ಮೀಟಿಂಗ್‌ನತ್ತ ರೈತರ ಚಿತ್ತ ?
ಕಳೆದ ಬಾರಿ ಬರಗಾಲದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಒಂದೇ ಹಂಗಾಮಿಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಮುಂಗಾರು ಉತ್ತಮವಾಗಿದ್ದು, ಮಲೆನಾಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ನಾಲ್ಕು ಜಿಲ್ಲೆಗಳ ರೈತರ ಚಿತ್ತ ಐಸಿಸಿ ಮೀಟಿಂಗ್‌ನತ್ತ ಹೊರಳಿದೆ.
‘ಕಾಲೇವುಕ ಜಲ್ದಿ ನೀರು ಹರಿಸಿದ್ರ ಬೇಸು’
“ಹೋದ ವರ್ಷ ಬರಗಾಲದಿಂದ ಒಂದೇ ಬೆಳೆ ಆತಿ. ನೆಲ್ಲಿನ ರೇಟೇನು ಇತ್ರಿ. ಆದ್ರ ಇನ್ನೊಂದು ಬೆಳಿ ಬೆಳ್ಯಾಕ ಕಾಲೇವುದಾಗ ನೀರಾ ಇರ್ಲಿಲ್ಲ. ಈ ಬಾರಿ ಮುಂಗಾರು ಮಳಿ ಚಲೋ ಆಗಾಕತ್ತೈತಿ. ಡ್ಯಾಮಿಗೂ ನೀರು ಬರಾಕತ್ಯಾವ, ಅಂಗಾಗಿ ಕಾಲೇವುಕ ಜಲ್ದಿ ನೀರು ಹರಿಸಿದ್ರ ಬೇಸು. ಗದ್ದಿ ಕೆಲ್ಸಾ ಇಲ್ದದಕ ಮಂದಿ ದುಡ್ಯಾಕ ಬೆಂಗ್ಳೂರಿಗೆ ಹೊಂಟರ‍್ರಿ. ನೀರು ಬುಟ್ರ ಇಲ್ಲೇ ಕೆಲ್ಸಾ ಸಿಗತೈತಿ, ಇನ್ನೂ ರೈತರಿಗೂ ಪಾಡ ಆಗ್ತೈತಿ ನೋಡ್ರಿ” ಎಂದು ಅಚ್ಚುಕಟ್ಟು ಪ್ರದೇಶದ ರೈತರೊಬ್ಬರು ಹೇಳುತ್ತಾರೆ.