(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 16
ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಹಳ್ಳದ ಬ್ರಿಡ್ಜ್ ಮೇಲೆ ಉಂಟಾಗಿರುವ ಬಿರುಕು ಹಾಗೂ ಕಂದಕಗಳಿಗೆ ಮಂಗಳವಾರ ಸಿಮೆಂಟ್ ಹಾಕುತ್ತಿರುವುದು ಕಂಡುಬಂತು. ಕಳೆದ ಹಲವು ದಿನಗಳ ಹಿಂದೆ ಬ್ರಿಡ್ಜ್ ವಿಸ್ತರಣೆ ಕಾಮಗಾರಿ ತರಾತುರಿಯಲ್ಲಿ ಪೂರ್ಣಗೊಳಿಸಿ, ರಸ್ತೆ ಸಮತಟ್ಟುಗೊಳಿಸದೇ ಹಾಗೆಯೇ ಬಿಟ್ಟಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಮಂಗಳವಾರ ಬಿರುಕು ಹಾಗೂ ಕಂದಕಗಳಿಗೆ ಸಿಮೆಂಟ್ ಹಾಕುತ್ತಿರುವವರನ್ನು ಮಾತನಾಡಿಸಿದಾಗ “ದಡೇಸುಗೂರಿನಲ್ಲಿ ಬ್ರಿಡ್ಜ್ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರೊಬ್ಬರು, ಇಲ್ಲಿನ ಹಳ್ಳದ ಬ್ರಿಡ್ಜ್ ಮೇಲೆ ಕಾಣಿಸಿಕೊಂಡಿರುವ ಬಿರುಕು, ಕಂದಕಗಳಿಗೆ ಸಿಮೆಂಟ್,ಕAಕರ್ ಹಾಕುವಂತೆ ಹೇಳಿದ್ದಾರೆ. ಹಾಗಾಗಿ ನಿನ್ನೆಯಿಂದ ಕೆಲಸ ಶುರುಮಾಡಿದ್ದೇವೆ” ಎಂದು ಪ್ರತಿಕ್ರಿಯಿಸಿದರು. ‘ಸಂಪೂರ್ಣ ರಸ್ತೆ ಸಮತಟ್ಟುಗೊಳಿಸುವುದು ಯಾವಾಗ ?, ಕೇವಲ ಅರೆಬರೆ ಕೆಲಸ ಮಾಡಿದರೆ ಹೇಗೆ ?” ಎಂದು ಕೇಳುತ್ತಿದ್ದಂತೆ, “ನೋಡ್ರಿ ನಮಗೆ ಎಷ್ಟು ಹೇಳಿದ್ದಾರೆ ಅಷ್ಟೇ ಕೆಲಸ ಮಾಡುತ್ತಿದ್ದೇವೆ. ಸಂಬಂಧಪಟ್ಟವರನ್ನು ಕೇಳಿ” ಎಂದು ಉತ್ತರಿಸಿದರು.
ಕೆಲಸ ಬಾಕಿ ಇರುವಾಗಲೇ ಸಾರ್ವಜನಿಕ ಬಳಕೆಗೆ
ಲೋಕಸಭೆ ಚುನಾವಣೆ ಸೇರಿದಂತೆ ನಾನಾ ನೆಪವೊಡ್ಡಿ ಹಳ್ಳದ ಹೆದ್ದಾರಿ ಬ್ರಿಡ್ಜ್ ಅನ್ನು ತರಾತುರಿಯಲ್ಲಿ ವಿಸ್ತರಣೆಗೊಳಿಸಿ, ಕೆಲಸ ಇನ್ನೂ ಬಾಕಿ ಇರುವಾಗಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಬ್ರಿಡ್ಜ್ ಮೇಲೆ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಿಪರೀತ ಧೂಳು ಏಳುತ್ತಿದೆ. ಹಳೆ ಸೇತುವೆ ಮತ್ತು ಹೊಸ ಸೇತುವೆಗಳನ್ನು ಸರಿಯಾಗಿ ಬೆಸೆಯದಿರುವುದರಿಂದ ಕೊರಕಲು ಉಂಟಾಗಿದ್ದು, ಕಂದಕಗಳು ಹಾಗೂ ಬಿರುಕು ಕಾಣಿಸಿಕೊಂಡಿದೆ. ಹೊಸ ಸೇತುವೆಯ ಪರಿಸ್ಥಿತಿಯೇ ಹೀಗಾದರೆ ಹೇಗೆ ಎಂದು ವಾಹನ ಸವಾರರು ಪ್ರಶ್ನಿಸುತ್ತಾರೆ.
ಸಣ್ಣ ಮಳೆ ಬಂದರೆ ಬ್ರಿಡ್ಜ್ ಮೇಲೆ ನೀರು !
ಸಣ್ಣ ಮಳೆ ಬಂದರೆ ಸಾಕು ಹಳ್ಳದ ಬ್ರಿಡ್ಜ್ ಮೇಲೆ ನೀರು ನಿಲ್ಲುತ್ತವೆ. ಇನ್ನೂ ದೊಡ್ಡ ಮಳೆಯಾದರೆ ಹೊಂಡದAತೆ ಮಾರ್ಪಾಡಾಗುತ್ತದೆ. ಬ್ರಿಡ್ಜ್ ಮೇಲೆ ನೀರು ನಿಲ್ಲದಂತೆ, ಒಂದು ವೇಳೆ ನಿಂತ ನೀರು ಬೇಗ ಹರಿದು ಹೋಗುವಂತೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲಲ್ಲಿ ಬ್ರಿಡ್ಜ್ ತಗ್ಗು-ದಿನ್ನೆಯಿಂದ ಕೂಡಿದೆ. ಹೀಗಾಗಿ ಮಳೆಯಾದರೆ ನೀರು ನಿಲ್ಲುವ ಪ್ರಮಾಣ ಹೆಚ್ಚಿದೆ. ಇದರಿಂದ ಬ್ರಿಡ್ಜ್ನ ಸುರಕ್ಷತೆ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಳ್ಳದ ಬ್ರಿಡ್ಜ್‌ನ ಅವ್ಯವಸ್ಥೆ ಕುರಿತು ನಮ್ಮ ಸಿಂಧನೂರು ವೆಬ್ ನ್ಯೂಸ್ ಹಲವು ಬಾರಿ ಲೈವ್ ಸುದ್ದಿಗಳನ್ನು, ಸಾರ್ವಜನಿಕರ ಅಭಿಪ್ರಾಯೊಂದಿಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದಿದ್ದನ್ನು ಗಮನಿಸಬಹುದು.