ನಮ್ಮ ಸಿಂಧನೂರು, ಜುಲೈ 15
ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ)ನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದರೂ, ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದಿರುವುದನ್ನು ಖಂಡಿಸಿ ಹಾಗೂ ಏಮ್ಸ್ ಮಂಜೂರಿಗೆ ಆಗ್ರಹಿಸಿ ಜುಲೈ16ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಸಿಂಧನೂರು ನಗರದಲ್ಲಿಯೂ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಡಿ.ಎಚ್.ಕಂಬಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಕಳೆದ 796 ದಿನಗಳಿಂದ ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿ ನೇತೃತ್ವದಲ್ಲಿ ಸುದೀರ್ಘ ಧರಣಿ ನಡೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದ ಭಾಗವಾಗಿದ್ದು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಿಂದ ಜನರಿಗೆ ವೈದ್ಯಕೀಯ ಸೌಲಭ್ಯದೊಂದಿಗೆ ಗುಣಮಟ್ಟದ ಚಿಕಿತ್ಸೆ, ದೊರೆಯಲಿದೆ. ಅಲ್ಲದೇ ಉದ್ಯೋಗ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಶಿಫಾರಸಿಗೆ ಮನ್ನಣೆ ನೀಡಿ, ರಾಯಚೂರು ಜಿಲ್ಲೆಯ ಸಮಸ್ತ ಜನರ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್‌ನಲ್ಲೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜುಲೈ ೧೬ರಂದು ನಡೆಯುವ ಹೋರಾಟದಲ್ಲಿ ಜನಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.