(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 11
ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ (ಸಿಬಿಎಸ್‌ಇ) ಮಂಜೂರಾಗಿ 2 ವರ್ಷಗಳು ಕಳೆದಿವೆ. ಇನ್ನೂ ಪ್ರವೇಶ ಪ್ರಕ್ರಿಯೆ ಆರಂಭವಾಗಿಲ್ಲ. ವರ್ಷದ ಹಿಂದೆಯೇ ಪಿಡಬ್ಲ್ಯುಡಿ ಕ್ಯಾಂಪಿನ ಬಿಸಿಎಂ ಹಾಸ್ಟೆಲ್‌ನ ಪಕ್ಕದಲ್ಲಿರುವ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿಗಳನ್ನು ಕೇಂದ್ರೀಯ ವಿದ್ಯಾಲಯಕ್ಕಾಗಿ ಸುಪರ್ದಿಗೆ ಪಡೆಯಲಾಗಿದ್ದು, ಒಂದೂವರೆ ವರ್ಷದಿಂದ ಇವು ನಿರುಪಯುಕ್ತವಾಗಿವೆ. ಹೀಗಾಗಿ ಮಕ್ಕಳ ಪಾಲಕರು ಬೋರ್ಡಿನಲ್ಲಷ್ಟೇ ‘ಕೇಂದ್ರೀಯ ವಿದ್ಯಾಲಯ’ ನೋಡುವಂತಾಗಿದೆ.
‘ಕೇಂದ್ರೀಯ ವಿದ್ಯಾಲಯ ಸಿಂಧನೂರು’ ಎಂದು ಆದರ್ಶ ವಿದ್ಯಾಲಯದ ಕಟ್ಟಡಕ್ಕೆ ಬರೆಯಲಾಗಿದ್ದು. ದ್ವಾರ ಬಾಗಿಲಿಗೆ ಬೀಗ ಹಾಕಿದ್ದಾರೆ. ಕೊಠಡಿಗಳ ಮುಂದಿನ ಆವರಣದಲ್ಲಿ ಕಸ-ಕಡ್ಡಿ ಬಿದ್ದು, ಕೊಠಡಿಗಳು ಧೂಳು ಹಿಡಿದಿವೆ. ಕೇಂದ್ರೀಯ ವಿದ್ಯಾಲಯಕ್ಕೆ ತಾತ್ಕಾಲಿಕವಾಗಿ ನಿಗದಿಪಡಿಸಿದ ಕೊಠಡಿಗಳು ನಿರುಪಯುಕ್ತವಾಗಿದ್ದರೂ, ಬೇರೆ ದಾರಿಯಿಲ್ಲದೇ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮೊದಲನೆ ಮಹಡಿಯಲ್ಲಿ ಅಭ್ಯಾಸ ಮಾಡುತ್ತಾರೆ. ಇತ್ತ ಕೇಂದ್ರೀಯ ವಿದ್ಯಾಲಯಕ್ಕೂ ಇಲ್ಲ, ಅತ್ತ ಆದರ್ಶ ವಿದ್ಯಾಲಯದ ಮಕ್ಕಳಿಗೂ ಈ ಕೊಠಡಿಗಳ ಸೌಲಭ್ಯ ಇಲ್ಲ. ಆದರೂ ಈ ಕೊಠಡಿಗಳನ್ನು ಈ ಹಿಂದೆ ಆಧುನೀಕರಿಸಿರುವುದು ಈಗ ನಗೆಪಾಟಲಿಗೀಡಾಗಿದೆ.
‘ಸಂಸದ, ಶಾಸಕರ ನಿಲ್ಷಕ್ಷ್ಯಕ್ಕೆ ಕೈಗನ್ನಡಿ’
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಕೇಂದ್ರೀಯ ವಿದ್ಯಾಲಯ ತಾತ್ಕಾಲಿಕ ಕಟ್ಟಡದಲ್ಲಿ ಇಷ್ಟೊತ್ತಿಗಾಗಲೇ ಕಾರ್ಯನಿರ್ವಹಿಸಬೇಕಿತ್ತು. ಇದರಿಂದ 1ರಿಂದ 10ನೇ ತರಗತಿವರೆಗೆ ಸಿಬಿಎಸ್‌ಇ ಮಾದರಿಯ ಶಿಕ್ಷಣ ಮಕ್ಕಳಿಗೆ ದೊರಕುತ್ತಿತ್ತು. ಆದರೆ ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ಸೌಲಭ್ಯ ಕೈಗೆಟುಕದಂತಾಗಿದೆ. ವಿದ್ಯಾಲಯ ಮಂಜೂರಾಗಿ ಎರಡು ವರ್ಷಗಳ ಗತಿಸಿದ ನಂತರವೂ ಪ್ರವೇಶ ಪ್ರಕ್ರಿಯೆ ನಡೆಯದಿರುವುದು ವಿಚಿತ್ರ, ವಿನೋದ, ವಿಪರ್ಯಾಸವಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಕದ ಗಂಗಾವತಿ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಎರಡ್ಮೂರು ವರ್ಷಗಳ ಹಿಂದೆಯೇ ಆರಂಭವಾಗಿದೆ. ಆದರೆ ಸಿಂಧನೂರಿನಲ್ಲಿ ಮಾತ್ರ ನನೆಗುದಿ ಬಿದ್ದಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಶಿಕ್ಷಣದ ಬಗ್ಗೆ ಏಕೋ ಏನೋ ಮರೆವು ಕಾಡುತ್ತಿದೆ, ಸಂಸದ, ಶಾಸಕರ ನಿರ್ಲಕ್ಷ್ಯಕ್ಕೆ ಇದೊಂದು ಜ್ವಲಂತ ಸಾಕ್ಷಿ ಎಂದು ಸಾರ್ವಜನಿಕರು ವಿದ್ಯಾರ್ಥಿಗಳ ಪಾಲಕರು ಆಪಾದಿಸಿದ್ದಾರೆ.
ಏಳುರಾಗಿ ಕ್ಯಾಂಪ್‌ನಲ್ಲಿ ಶಾಶ್ವತ ಕಟ್ಟಡದ ಕತೆ ಏನಾಯ್ತು ?
ಸಿಂಧನೂರಿಗೆ ಮಂಜೂರಾದ ಕೇಂದ್ರೀಯ ವಿದ್ಯಾಲಯ ನಿರ್ಮಾಣದ ಹಿನ್ನೆಲೆಯಲ್ಲಿ ನಗರದ ಏಳುರಾಗಿ ಕ್ಯಾಂಪ್ ಬಳಿ ಕಾಯ್ದಿರಿಸಿದ ಭೂಮಿ ಮತ್ತು ಪಿಡಬ್ಲ್ಯುಡಿ ಕ್ಯಾಂಪಿನ ಆದರ್ಶ ವಿದ್ಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಸಲು ಜೂನ್ 18, 2022ರಂದು ಅಂದಿನ ಕೊಪ್ಪಳ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಹಾಗೂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರು ಭೇಟಿ ನೀಡಿ ಪರಿಶೀಲಿಸಿದ್ದರು.
ಹುಸಿಯಾದ ಭರವಸೆ
“ನಗರದ ಏಳುರಾಗಿ ಕ್ಯಾಂಪ್ ಬಳಿ 7.22 ಎಕರೆ ಪ್ರದೇಶದಲ್ಲಿ ಸಿಬಿಎಸ್‌ಇ ಮಾದರಿಯ ಪಠ್ಯದ ಕೇಂದ್ರೀಯ ವಿದ್ಯಾಲಯ ನೂತನ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ 2021-22ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 67 ಲಕ್ಷ ರೂಪಾಯಿ ಮಂಜೂರಾಗಿದೆ. ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಆರಂಬಿಸಬೇಕಾಗಿರುವುದರಿಂದ, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆದರ್ಶ ವಿದ್ಯಾಲಯದ 14 ಕೊಠಡಿಗಳು, ಒಳಾಂಗಣ ಮತ್ತು ಹೊರಾಂಗಣವನ್ನು 30 ಲಕ್ಷ ವೆಚ್ಚದಲ್ಲಿ ಆಧುನೀಕರಿಸಲಾಗಿದೆ. 32 ಲಕ್ಷ ರೂ ವೆಚ್ಚದಲ್ಲಿ ಮುಖ್ಯರಸ್ತೆಯಿಂದ ಕೇಂದ್ರೀಯ ವಿದ್ಯಾಲಯ ನಿರ್ಮಾಣವಾಗುವ ಸ್ಥಳಕ್ಕೆ ಸಂಪರ್ಕ ರಸ್ತೆ ನಿರ್ಮಿಸಲಾಗುವುದು. ಆದರೆ ಇಲ್ಲಿ ಜಾಗದ ವಿವಾದವಿದ್ದು, ಅದನ್ನು ಪರಿಹರಿಸಲಾಗುವುದು. 5 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ವೈರ್ ಅಳವಡಿಸಲಾಗುವುದು. ಆದಷ್ಟು ಎಲ್ಲ ಕೆಲಸಗಳನ್ನು ಬೇಗ ಪೂರ್ಣಗೊಳಿಸಿ ಡಿಸಿಯವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಅಂದಿನ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ವೆಂಕಟರಾವ್ ನಾಡಗೌಡ ಅವರು ಮಾಧ್ಯಮದವರಿಗೆ ತಿಳಿಸಿದ್ದರು.
ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಪೇಚಾಟ !
ಕೇಂದ್ರೀಯ ವಿದ್ಯಾಲಯವನ್ನು ತಾತ್ಕಾಲಿಕವಾಗಿ ಆರಂಭಿಸಲು ಈ ಹಿಂದೆ ಚುರುಕಿನ ಪ್ರಕ್ರಿಯೆ ನಡೆದಿತ್ತು. ಅಂದಿನ ಸಂಸದ, ಶಾಸಕರ ನಿರ್ದೇಶನದ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಕ್ಯಾಂಪ್‌ನ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ ಇಲ್ಲಿಯವರೆಗೂ ವಿದ್ಯಾಲಯ ಆರಂಭವಾಗಿಲ್ಲ. ಹೀಗಾಗಿ ಆದರ್ಶ ವಿದ್ಯಾಲಯದಲ್ಲಿ ಕಲಿಯುತ್ತಿರುವ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಠಡಿ ಕೊರತೆ ಎದುರಾಗಿದೆ. ಕೆಳಗೆ ಕೊಠಡಿಗಳು ಇದ್ದರೂ ಬಳಕೆಗೆ ಇಲ್ಲದಂತಾಗಿದೆ.
‘ಧ್ವನಿ ಎತ್ತಿದ ಪರಾಜಿತ ಅಭ್ಯರ್ಥಿ, ಸನ್ಮಾನದಲ್ಲಿ ಮುಳುಗಿದ ಹಾಲಿ ಸಂಸದ’
ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದರೂ ಸರ್ಕಾರ ವಿದ್ಯಾರ್ಥಿಗಳ ಪ್ರವೇಶಕ್ಕೆ ಇಲ್ಲಿಯವರೆಗೂ ಅನುಮತಿ ನೀಡಿಲ್ಲ. ಹಾಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೊಪ್ಪಳ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಹೊಸದಿಲ್ಲಿಯಲ್ಲಿ ಕೇಂದ್ರೀಯ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಆದರೆ, ಹಾಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಅವರು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸನ್ಮಾನ ಕಾರ್ಯಕ್ರಮಗಳಲ್ಲಿ ಮುಳುಗಿದ್ದಾರೆ. ಈ ನಡುವೆ ಶಾಸಕ ಹಂಪನಗೌಡ ಬಾದರ್ಲಿಯವರೂ ಈ ಬಗ್ಗೆ ಕಾಳಜಿ ವಹಿಸಿಲ್ಲ. ಕೇಂದ್ರೀಯ ವಿದ್ಯಾಲಯ ಮಂಜೂರಾಗಿ ಎರಡು ವರ್ಷಗಳು ಕಳೆದರೂ ಇಲ್ಲಿಯವರೆಗೂ ವಿಳಂಬವಾಗಿರುವುದು ಏಕೆನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಮುಂದಾಗದೇ ಇರುವುದು ಜನಪ್ರತಿನಿಧಿಗಳ ಶೈಕ್ಷಣಿಕ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.