ನಮ್ಮ ಸಿಂಧನೂರು, ಜುಲೈ 10
ಎಲ್ & ಟಿ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಪಾವತಿಸದ ನೆಪವೊಡ್ಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬರ ಸೇರಿದಂತೆ ಇನ್ನಿತರೆ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಂದ ಒತ್ತಾಯ ಪೂರ್ವಕವಾಗಿ ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು. ರೈತರ ಮೇಲೆ ಅನಗತ್ಯ ಕಿರುಕುಳ ನೀಡುತ್ತಿರುವ ಖಾಸಗಿ ಹಣಕಾಸು ಕಂಪನಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಯಲ್ಲಮ್ಮ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಹಳ್ಳದ ಸೇತುವೆ, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಕನದಾಸ ಸರ್ಕಲ್ ಮೂಲಕ ತಹಸೀಲ್ ಕಚೇರಿಗೆ ತೆರಳಿತು. ರ್ಯಾಲಿ ಆರಂಭಕ್ಕೂ ಮುನ್ನ ಯಲ್ಲಮ್ಮ ದೇವಸ್ಥಾನದ ಬಳಿ ರೈತರು ಟ್ರಾö್ಯಕ್ಟರ್ಗಳೊಂದಿಗೆ ಜಮಾಯಿಸಿದರು. ಖಾಸಗಿ ಹಣಕಾಸು ಕಂಪನಿಯ ಕಚೇರಿಗೆ ಮುತ್ತಿಗೆ ವಿಷಯ ತಿಳಿದು ಆ ಕಂಪನಿಯವರು ಕೋರ್ಟ್ ಮೊರೆ ಹೋಗಿರುವ ವಿಚಾರ ರೈತರಿಗೆ ಗೊತ್ತಾಯಿತು. ತದನಂತರ ಹೋರಾಟ ರೂಪುರೇಷೆ ಬದಲಿಸಿದ ರೈತರು ನೇರವಾಗಿ ತಹಸೀಲ್ ಕಾರ್ಯಾಲಯಕ್ಕೆ ರ್ಯಾಲಿ ಹೊರಡಲು ಸಿದ್ಧರಾದರು. ಈ ಸಂದಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ತಿಳಿಯಾಗಿ ರ್ಯಾಲಿ ಆರಂಭವಾಯಿತು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚುನ್ನಪ್ಪಾ ಪೂಜೇರಿ ಅವರು ರ್ಯಾಲಿಗೆ ಚಾಲನೆ ನೀಡಿದರು.
ಖಾಸಗಿ ಹಣಕಾಸು ಕಂಪನಿಗಳು ರೈತರಿಗೆ ಟ್ರಾಕ್ಟರ್ ಕೊಂಡುಕೊಳ್ಳಲು ಸಾಲ ನೀಡಿ, ತದನಂತರ ಕಿರುಕುಳ ಕೊಡುತ್ತಿರುವುದಲ್ಲದೇ ಮಾನಸಿಕ ನೆಮ್ಮದಿಗೆ ಭಂಗ ತಂದಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಇಂತಹ ಖಾಸಗಿ ಹಣಕಾಸು ಕಂಪನಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರ ರೈತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಖರ್ಚಿಗೆ ಅನುಗುಣವಾಗಿ ಬೆಲೆ ನೀತಿ ರೂಪಿಸಬೇಕು, ಡಾ.ಎಂ.ಸ್ವಾಮಿನಾಥನ್ ವರದಿ ಜಾರಿಯಾಗುವವರೆಗೂ ರೈತ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕೃಷಿಗೆ ಸಂಬಂಧಿಸಿದಂತೆ ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕ್ಗಳು, ಮೈಕ್ರೋ ಫೈನಾನ್ಸ್ ಗಳು, ಸರಕಾರಿ, ಅರೆ ಸರಕಾರಿ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಯನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಚುನ್ನಪ್ಪಾ ಪೂಜೇರಿ, ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ, ಮುಖಂಡರಾದ ರಾಮಯ್ಯ ಜವಳಗೇರಾ ಸೇರಿದಂತೆ ಹಲವು ಇದ್ದರು.