(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 8
ಮುಗಿಲ ತುಂಬ ಮೋಡಗಳು ತುಳುಕಾಡುತ್ತಿವೆ, ಹನಿ ಮಾತ್ರ ಉದುರಿಸುತ್ತಿಲ್ಲ. ಒಂದೇ ಸವನೇ ಗಾಳಿ ಬೀಸುತ್ತಿದೆ, ಗೇಣುದ್ದದ ಬೆಳೆಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿವೆ. ಎಲೆಗಳು ಮುದುಡಿ, ನೆಲಕ್ಕೆ ಲಾಪು ಹೊಡೆಯುತ್ತಿವೆ. ಕಳೆದ ಮೂರು ವಾರಗಳಿಂದ ಮಳೆ ಕೈಕೊಟ್ಟಿದ್ದು, ನೆಲದ ತೇವ ಆರುತ್ತಿರುವುದರಿಂದ ರೈತರಲ್ಲಿ ಮಂಕು ಕವಿದೆ.
ಮಳೆಯಾಶ್ರಿತ ಸಿಂಧನೂರು, ಮಸ್ಕಿ ತಾಲೂಕು ವ್ಯಾಪ್ತಿಯ ಹಲವು ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಸಜ್ಜೆ, ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಮುಂಗಾರು ಆರಂಭದಲ್ಲಿ ಆರ್ಭಟಿಸಿದ್ದರಿಂದ ರೈತರು ಉತ್ಸಾಹದಿಂದಲೇ ಉಳುಮೆ ಕೈಗೊಂಡಿದ್ದರು. ಆದರೆ ಕೃಷಿ ಚಟುವಟಿಕೆ ಮುಗಿದು ಬೆಳೆಗಳು ಗೇಣುದ್ದ ಬೆಳೆಯುವಷ್ಟರಲ್ಲಿ ಮಳೆ ಸುರಿಯದೇ, ಒಣ ಹವೆ ಮುಂದುವರಿದಿದ್ದು, ರೈತರನ್ನು ಆತಂಕ ಬೆನ್ನಟ್ಟಿದೆ.
ಓಡುವ ಮೋಡ, ಹಗಲಿಡೀ ಒಣಹವೆ
ಬೆಳಿಗ್ಗೆಯಿಂದಲೇ ಮೋಡಗಳು ಕವಿಯುತ್ತಿದ್ದರೂ ಮಳೆ ಸುರಿಯುತ್ತಿಲ್ಲ. ಒಂದೊಮ್ಮೆ ಬಿಸಿಲು, ಒಂದೊಮ್ಮೆ ಕಾರ್ಮೋಡಗಟ್ಟಿ ಇನ್ನೇನು ಮಳೆ ಬೀಳುತ್ತದೆ ಎನ್ನುವಷ್ಟರಲ್ಲಿ ನಾಲ್ಕಾರು ಹನಿ ಸುರಿದ ಗಪ್ಪನೆ ನಿಲ್ಲುತ್ತದೆ. ಬೆಳೆಗಳು ಒಣಗುತ್ತಿರುವುದನ್ನು ನೋಡಿ ಕರುಳು ಚರ‍್ರಕ್ ಎನ್ನುತ್ತದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಮಸ್ಕಿ ತಾಲೂಕಿನ ಅಡವಿಗಳಲ್ಲಿ ತೊಗರಿ ಸೂಫರ್ !
ಮಸ್ಕಿ ತಾಲೂಕಿನ ಹಸಮಕಲ್, ಗುಡದೂರು, ದೀನಸಮುದ್ರ, ಪರಾಪುರ, ಗುಡಗಲದಿನ್ನಿ, ನಂಜಲದಿನ್ನಿ ಸೇರಿದಂತೆ ಹಲವು ಗ್ರಾಮಗಳ ಮಳೆಯಾಶ್ರಿತ ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಬೆಳೆಗಳು ಹುಲುಸಾಗಿವೆ. ಆದರೆ ಮಳೆಯ ಕೊರತೆ ರೈತರನ್ನು ಕಾಡುತ್ತಿದೆ. ಬಹಳಷ್ಟು ಜನರು ತೊಗರಿ ಬೆಳೆಗೆ ಮೊರೆ ಹೋಗಿದ್ದರೆ, ಇನ್ನುಳಿದವರು, ಸಜ್ಜೆ ಹಾಗೂ ಹತ್ತಿ ಬಿತ್ತನೆ ಮಾಡಿದ್ದಾರೆ.
ಸಿಂಧನೂರು ತಾಲೂಕಿನಲ್ಲೂ ಮಳೆ ಕೊರತೆ
ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಸಿಂಧನೂರು ತಾಲೂಕಿನ ಮಳೆಯಾಶ್ರಿತ ಗ್ರಾಮಗಳಲ್ಲಿ ತೊಗರಿ, ಸಜ್ಜೆ ಹತ್ತಿ ಹಾಗೂ ಇನ್ನಿತರೆ ಅಕ್ಕಡಿಕಾಳಿನ ಬೆಳೆಗಳು ಮಳೆ ಅಭಾವದಿಂದ ಒಣಗುತ್ತಿವೆ. ತುರ್ವಿಹಾಳ ಹೋಬಳಿ ವ್ಯಾಪ್ತಿಯ ಕಲಮಂಗಿ, ಹಿರೇಬೇರ್ಗಿ, ಚಿಕ್ಕಭರ‍್ಗಿ, ಮಾಂಪುರ, ಕರಡಚಿಲುಮಿ, ಗೊರಲೂಟಿ, ಹತ್ತಿಗುಡ್ಡ, ವೀರಾಪುರ, ಉಮಲೂಟಿ ಸೇರಿದಂತೆ ಇನ್ನತರ ಗ್ರಾಮೀಣ ಪ್ರದೇಶದಲ್ಲಿ ಮಳೆ ಕೊರತೆ ರೈತರನ್ನು ಚಿಂತೆಗೀಡು ಮಾಡಿದೆ.