ಮಸ್ಕಿ: ಈ ಬಾರಿಯಾದರೂ ಮಿನಿ ವಿಧಾನಸೌಧ ನಿರ್ಮಾಣವಾಗುವುದೇ ?

Spread the love

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 7

ಮಸ್ಕಿ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಮಿನಿ ವಿಧಾನಸೌಧ (ಆಡಳಿತ ಸೌಧ) ಮಂಜೂರು ಹಾಗೂ ನಿರ್ಮಾಣದ ಕೆಲಸ ನನೆಗುದಿ ಬಿದ್ದ ಪರಿಣಾಮ ನೂತನ ತಾಲೂಕಿನ ಜನರು ಕಳೆದ ದಶಕದಿಂದ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊಸ ಶಾಸಕರ ಆಡಳಿತಾವಧಿಯಲ್ಲಾದರೂ ಆಡಳಿತ ಸೌಧ ಆದೀತೆ ಎಂದು ಎದುರು ನೋಡುತ್ತಿದ್ದಾರೆ.
ಮಸ್ಕಿ ತಾಲೂಕು ವ್ಯಾಪ್ತಿಗೆ ಸಿಂಧನೂರು, ಮಾನ್ವಿ, ಲಿಂಗಸುಗೂರು ಮೂರು ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳು ಬರುತ್ತಿದ್ದು, ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬಂದರೆ ಅಧಿಕಾರಿಗಳು ಸಕಾಲದಲ್ಲಿ ಸಿಗದ ಕಾರಣ ಅಲೆದಾಡುವಂತಾಗಿದೆ. ಹೊಸ ತಾಲೂಕು ಕೇಂದ್ರದಲ್ಲಿ ಇಲ್ಲಿಯವರೆಗೂ ಹಲವು ಇಲಾಖೆಯ ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸದೇ ಹರಿದು ಹಂಚಿ ಹೋಗಿದ್ದು, ಕೆಲವೊಂದು ಸಂದರ್ಭದಲ್ಲಿ ಮಸ್ಕಿ ಪಟ್ಟಣ ಹೊರತುಪಡಿಸಿ, ಉಳಿದ ತಾಲೂಕು ಕೇಂದ್ರಗಳಿಗೆ ಜನರು ಅಲೆದಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ತಹಸೀಲ್ದಾರ್ ಕಾರ್ಯಾಲಯ ಹೊರತುಪಡಿಸಿ ಉಳಿದಂತೆ ಸಬ್ ರಿಜಿಸ್ಟ್ರಾರ್ , ಖಜಾನೆ, ಸರ್ವೆ ಇಲಾಖೆ ಇನ್ನೂ ಹತ್ತು ಹಲವು ಇಲಾಖೆ ಕಚೇರಿಗಳಿಗಾಗಿ ಹುಡುಕಾಡುವಂತಾಗಿದೆ. ಹೊಸ ತಾಲೂಕಿನ ಜನರು ಇನ್ನೂ ಹಳೆ ತಾಲೂಕು ಕೇಂದ್ರಕ್ಕೆ ಎಡತಾಕುವುದು ತಪ್ಪಿಲ್ಲ !
ಕೆಕೆಆರ್‌ಡಿಬಿಗೆ 5000 ಕೋಟಿ ರೂಪಾಯಿ ಅನುದಾನ
ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಭಾಗದ ಶಾಸಕರು, ಸಚಿವರ ಸಭೆಯಲ್ಲಿ, 2024-25ನೇ ಸಾಲಿನ ಬಜೆಟ್‌ನಲ್ಲಿ 5000 ಕೋಟಿ ರೂಪಾಯಿ ತೆಗೆದಿರಿಸಲು ತೀರ್ಮಾನ ತೆಗೆದುಕೊಂಡಿದ್ದು, ಈ ಬಾರಿಯಾದರೂ ಮಿನಿ ವಿಧಾನಸೌಧಕ್ಕೆ ಚಾಲನೆ ದೊರೆತೀತೆ ಎಂಬ ಆಶಾಭಾವ ಜನರಲ್ಲಿ ಮೂಡಿದೆ.
135 ಕೋಟಿ ವೆಚ್ಚದಲ್ಲಿ 9 ಮಿನಿ ವಿಧಾನಸೌಧ ನಿರ್ಮಾಣದ ನಿರ್ಧಾರ
ಸಿಎಂ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಂದಾಯ ಇಲಾಖೆಯ ಅನುದಾನಗಳನ್ನು ಬಳಸಿಕೊಂಡು 135 ಕೋಟಿ ರೂಪಾಯಿ ವೆಚ್ಚದಲ್ಲಿ 9 ಆಡಳಿತ ಸೌಧ ನಿರ್ಮಿಸಲು ನಿರ್ಧರಿಸಿದ್ದು, ಮಸ್ಕಿ ತಾಲೂಕು ಕೇಂದ್ರಕ್ಕೂ ಈ ಬಾರಿ ಮಿನಿ ವಿಧಾನಸೌಧವನ್ನು ಮಂಜೂರು ಮಾಡಬೇಕೆಂಬುದು ತಾಲೂಕಿನ ಜನರ ಆಗ್ರಹವಾಗಿದೆ.
‘ಮಿನಿ ವಿಧಾನಸೌಧ ನಿರ್ಮಾಣದ ಜಾಗ ಬೇಗ ಗುರುತಿಸಿ’
ಮಸ್ಕಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಂಬಂಧಿಸಿದ ಜಾಗದ ಬಗ್ಗೆ ಇನ್ನೂ ಗೊಂದಲವಿದೆ. ಈ ಬಗ್ಗೆ ಶಾಸಕರು ಆಸಕ್ತಿ ವಹಿಸಿ ಕ್ರಮಕ್ಕೆ ಮುಂದಾಗಬೇಕು. ಜನರಿಗೆ ಅನುಕೂಲವಿರುವ ಪ್ರದೇಶದಲ್ಲಿ ಆಡಳಿತ ಸೌಧ ನಿರ್ಮಾಣವಾಗಬೇಕು. ಖಾಸಗಿ ವ್ಯಕ್ತಿಗಳ ಪ್ರಭಾವ, ರಿಯಲ್ ಎಸ್ಟೇಟ್ ಮಾಫಿಯಾದವರ ಅಣತಿಗೆ ಒಳಗಾಗದೇ ವೈಜ್ಞಾನಿಕವಾಗಿ, ಸೂಕ್ತ ಸ್ಥಳದಲ್ಲಿ ಜಾಗ ಗುರುತಿಸಿ ಕೆಕೆಆರ್‌ಡಿಬಿ ಮತ್ತು ಕಂದಾಯ ಇಲಾಖೆಗೆ ಆದಷ್ಟು ಬೇಗನೆ ಪ್ರಸ್ತಾವನೆ ಕಳುಹಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *