ಸಿಂಧನೂರು: ಪ್ಯಾಲಿಸ್ಟೇನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಸಿಪಿಐ(ಎಂಎಲ್) ಮಾಸ್‌ಲೈನ್‌ನಿಂದ ಪ್ರತಿಭಟನೆ

Spread the love

ನಮ್ಮ ಸಿಂಧನೂರು, ಜುಲೈ 6
ಪ್ಯಾಲಿಸ್ಟೇನ್ ಮೇಲಿನ ಇಸ್ರೇಲ್‌ನ ದಾಳಿಯನ್ನು ಖಂಡಿಸಿ, ಪ್ಯಾಲಿಸ್ಟೇನ್‌ನಲ್ಲಿ ಶಾಂತಿ ನೆಲೆಸುವವರೆಗೂ ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಎಲ್ಲಾ ವಿದೇಶಾಂಗ ಒಪ್ಪಂದಗಳನ್ನು ಭಾರತ ಸರ್ಕಾರ ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಕರೆ ನೀಡಿರುವ ಪ್ರತಿಭಟನೆ ದಿನದ ಅಂಗವಾಗಿ ಸಿಪಿಐ(ಎಂಎಲ್) ಮಾಸ್‌ಲೈನ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಶನಿವಾರ ಮನವಿಪತ್ರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಪ್ಯಾಲಿಸ್ಟೇನ್‌ 1948ರಿಂದಲೂ ಇಸ್ರೇಲ್‌ನ ದಬ್ಬಾಳಿಕೆಯನ್ನು ಎದುರಿಸುತ್ತಿದೆ. ಇಸ್ರೇಲ್, ಗಾಜಾದಲ್ಲಿ ನಿರಂತರ ಬಾಂಬ್ ದಾಳಿ ನಡೆಸುತ್ತಿದ್ದು, ಪ್ರಾಣ ರಕ್ಷಣೆಗಾಗಿ 15 ಲಕ್ಷ ಪ್ಯಾಲಿಸ್ಟೇನಿಯರನ್ನರು ಅಂತಾರಾಷ್ಟ್ರೀಯ ಸಮೂಹಕ್ಕೆ ಮೊರೆಯಿಡುತ್ತಿದ್ದಾರೆ. ಈ ನಡುವೆಯೂ ರಫಾ ಪ್ರದೇಶದ ಮೇಲೆ ಇಸ್ರೇಲ್ ಅಮಾನವೀಯ ಬಾಂಬ್ ದಾಳಿ ಮುಂದುವರಿಸಿದೆ. ಇಲ್ಲಿನ ಜನರು ಆಹಾರ, ನೀರು, ಔಷಧಿ ಕೊರತೆ ಎದುರಿಸುತ್ತಿದ್ದಾರೆ. ರಫಾ ಗಡಿಯ ಮೂಲಕ ಅಥವಾ ಇನ್ನಿತರೆ ಯಾವುದೇ ಗಡಿಯ ಮುಖಾಂತರ ಗಾಜಾಕ್ಕೆ ಮಾನವೀಯ ನೆರವು ದೊರೆಯದಂತೆ ಇಸ್ರೇಲ್ ಸಂಪೂರ್ಣ ನಿರ್ಬಂಧಿಸಿದ್ದು, ಇದು ಪೈಶಾಚಿಕತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

Namma Sindhanuru Click For Breaking & Local News

ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಮಾತನಾಡಿ, ಇಸ್ರೇಲ್, ಪ್ಯಾಲಿಸ್ಟೇನ್‌ನ ಮೇಲೆ ದಾಳಿ ನಡೆಸಿದ ಪರಿಣಾಮ ಇಲ್ಲಿಯವರೆ 37,396 ಜನರು ಮೃತಪಟ್ಟಿರುವ ಬಗ್ಗೆ ವರದಿಗಳಿದ್ದು, ಅದರಲ್ಲಿ ಶೇ.70ರಷ್ಟು ಮಕ್ಕಳು ಮತ್ತು ಮಹಿಳೆಯರು ಸೇರಿರುವುದು ಆಘಾತಕಾರಿಯಾಗಿದೆ. ಜನರ ಮಾರಣಹೋಮ ನಡೆಸುತ್ತಿರುವ ಇಸ್ರೇಲ್‌ನ ಈ ನೀತಿ ಖಂಡನಾರ್ಹವಾಗಿದೆ. ಈ ಕೂಡಲೇ ಇಸ್ರೇಲ್ ದಾಳಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಭರ‍್ಗಿ, ಅಮೇರಿಕಾ ಮತ್ತು ಇತರ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ದೇಶಗಳು ಇಸ್ರೇಲ್ ಅನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು, ಭಾರತ ಸರ್ಕಾರವು ಇಸ್ರೇಲ್ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಬೇಕು ಮತ್ತು ವಿದೇಶಾಂಗ ಒಪ್ಪಂದಗಳನ್ನು ರದ್ದುಗೊಳಿಸಬೇಕು, ಪ್ಯಾಲಿಸ್ಟೇನ್‌ ಜನರ ಮೇಲಿನ ಎಲ್ಲಾ ದ್ವೇಷ ಮತ್ತು ಹಗೆತನಗಳನ್ನು ಇಸ್ರೇಲ್ ತಕ್ಷಣವೇ ನಿಲ್ಲಿಸಬೇಕು, ಇಸ್ರೇಲ್ ತಕ್ಷಣವೇ ಎಲ್ಲಾ ಸಶಸ್ತ್ರ ಪಡೆಗಳನ್ನು 1967 ರ ಒಪ್ಪಂದದ ಪ್ರಕಾರ ವಾಪಸ್ ಕರೆಸಿಕೊಳ್ಳಬೇಕು, ರಫಾ ಮತ್ತು ಗಾಜಾದಲ್ಲಿ ಉಳಿದಿರುವ ಜನರಿಗೆ ಮಾನವೀಯ ಸಹಾಯವನ್ನು ನೀಡಬೇಕು, ಗಾಜಾದ ಪುನರ್ನಿರ್ಮಾಣಕ್ಕಾಗಿ ವಿಶ್ವಸಂಸ್ಥೆ ವಿಸ್ತೃತ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ ಕಾರ್ಯಾಲಯದ ಅಧಿಕಾರಿಗೆ ಓದಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ತಾಲೂಕು ಘಟಕದ ಉಪಾಧ್ಯಕ್ಷ ಚಿಟ್ಟಿಬಾಬು ಬೂದಿವಾಳಕ್ಯಾಂಪ್, ದುರುಗಪ್ಪ ದೇವರಮನಿ, ಮಲ್ಲಯ್ಯ ಕೆಂಗಲ್, ಮಹ್ಮದ್ ಯಾಸಿನ್, ಬಸಪ್ಪ ಕಡಬೂರು, ಯಲ್ಲಪ್ಪ ಭಜಂತ್ರಿ ಭೇರ್ಗಿ, ತಿಮೋತಿ ಹಂಚಿನಾಳಕ್ಯಾಂಪ್, ವೆಂಕಟೇಶ್ ಉದ್ಬಾಳ್, ಮಹ್ಮದ್ ರಫಿ, ನಿಂಗಪ್ಪ ಚಿಕ್ಕಭರ‍್ಗಿ, ಕನಕಪ್ಪ ಚಿಕ್ಕಭೇರ್ಗಿ, ಮರಿಯಪ್ಪ ಚಿಕ್ಕಭೇರ್ಗಿ, ನಿಂಗಪ್ಪ ರಂಗಾಪುರ ಕ್ಯಾಂಪ್ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *