(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 20
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 20-06-2024 ಗುರುವಾರದಂದು 259 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 1796 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 4.35 ಟಿಎಂಸಿ ನೀರು ಸಂಗ್ರಹವಿದ್ದರೆ, 451 ಕ್ಯೂಸೆಕ್ ನೀರು ಒಳಹರಿವಿತ್ತು, 1553 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಬೇಸಿಗೆಯ ಬಿಸಿಲ ಧಗೆಯಿಂದಾಗಿ ಈ ಬಾರಿ ಜೂನ್ ಆರಂಭದಲ್ಲೇ ರಾಯಚೂರು ಬಳಿಯ ಗಣೇಕಲ್ ಜಲಾಶಯ, ಸಿಂಧನೂರಿಗೆ ನೀರು ಪೂರೈಸುವ ತುರ್ವಿಹಾಳ ಕೆರೆ ಸೇರಿದಂತೆ, ಮಾನ್ವಿ, ಮಸ್ಕಿ ತಾಲೂಕಿನ ಹಲವು ಕುಡಿಯುವ ನೀರಿನ ಕೆರೆಗಳು ಖಾಲಿಯಾದ ಹಿನ್ನೆಲೆಯಲ್ಲಿ, ಅವುಗಳನ್ನು ತುಂಬಿಸಿಕೊಳ್ಳಲು ಜೂನ್ 15ರಿಂದ 25ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಸೇರಿದಂತೆ ಇನ್ನಿತರೆ ಉಪಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಕ್ಷೀಣಿಸಿದ ಮಳೆ
ಶಿವಮೊಗ್ಗ ಭಾಗದಲ್ಲಿ ಮಳೆಯ ಪ್ರಮಾಣ ಕಳೆದ ಒಂದು ವಾರದಿಂದ ಬಹಳಷ್ಟು ಕ್ಷೀಣಿಸಿದ್ದು, ಈಗಾಗಿ ಜೂನ್‌ನಲ್ಲಿ ತುಂಗಭದ್ರಾ ಜಲಾಶಯಕ್ಕೆ 4800 ಕ್ಯೂಸೆಕ್ ಒಳಹರಿವು ಹೊರತುಪಡಿಸಿ, 5 ಸಾವಿರ ಗಡಿ ದಾಟಲಿಲ್ಲ. ಜೋರು ಮಳೆಯಾಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಜೂನ್ ಕಡೆಯ ವಾರ ಅಥವಾ ಜುಲೈ ಆರಂಭದಲ್ಲಿ ಜೋರು ಮಳೆಯಾಗಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದು ಬರಲಿ ಎಂಬುದು ರೈತರ ಆಶಯವಾಗಿದೆ.