(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 20
ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ಬಳಿಯಿರುವ ಅಕ್ಕಮಹಾದೇವಿ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಕ್ಕದ ಅರಣ್ಯ ಇಲಾಖೆಯ ವನದಲ್ಲಿ ವಿವಿಧ ತಳಿಯ ಸಾವಿರಾರು ಸಸಿಗಳು ವಿತರಣೆಗೆ ಸಿದ್ಧತೆಗೊಂಡಿದ್ದು, ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ. ಮಳೆಗಾಲದಲ್ಲಿ ಸಸಿಗಳನ್ನು ಹೊಲ-ಗದ್ದೆ, ಖಾಲಿ ಜಾಗ, ಮನೆ ಆವರಣ ಸೇರಿದಂತೆ ಇನ್ನಿತರೆ ಸಾರ್ವಜನಿಕ ಪ್ರದೇಶದಲ್ಲಿ ನೆಡುವುದು ವಾಡಿಕೆಯಾಗಿದ್ದು, ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.
ಕಳೆದ ಹಲವು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಸುರಿದಿದ್ದು ಹೊಲದ ಬದುವು, ಗೋಮಾಳ, ಮನೆಯ ಖಾಲಿ ಜಾಗ, ಹಿತ್ತಲು ಸೇರಿದಂತೆ ಹಲವೆಡೆ ಮಣ್ಣು ತೇವಗೊಂಡಿದೆ. ಇಂತಹ ಸಮಯದಲ್ಲಿ ಸಸಿಗಳನ್ನು ನೆಡುವುದರಿಂದ ಬೇಗನೆ ಚಿಗಿತುಕೊಳ್ಳುತ್ತವೆ ಎಂಬ ಉಮೇದಿಯಲ್ಲಿರುವ ಕೆಲವರು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಮಗೆ ಅವಶ್ಯವಿರುವ ಸಸಿಗಳನ್ನು ಒಯ್ಯುತ್ತಿದ್ದಾರೆ.
ಯಾವ್ಯಾವ ಸಸಿಗಳು
ಮಹಾಗನಿ, ಹೆಬ್ಬೇವು, ನೆಲ್ಲಿಕಾಯಿ, ಸೀತಾಫಲ, ಹುಣಸೇಗಿಡ, ತಪ್ಸಿ, ಆಲದಮರ, ಬೇವು, ನೇರಳೆ ಹಣ್ಣು, ಜಿಬ್ಬು ಹಣ್ಣು, ಹೊಂಗೆಮರ, ಬೇಲ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಸಸಿಗಳು ನರ್ಸರಿಯಲ್ಲಿ ಬೆಳೆಸಲಾಗಿದ್ದು, ಪೋಷಿಸಲಾಗುತ್ತಿದೆ.
ಸಸಿಗಳನ್ನು ಪಡೆಯುವುದು ಹೇಗೆ ?
ಹೊಲದಲ್ಲಿ ನೆಡಬಹುದಾದ ಸಸಿಗಳನ್ನು ರೈತರಿಗೆ ಅರಣ್ಯ ಇಲಾಖೆಯಿಂದ ವಿತರಿಸಲಾಗುತ್ತದೆ. ಬೇರೆ ಬೇರೆ ಸಸಿಗಳಿಗೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ರೈತರು ಪಹಣಿ ಅಗತ್ಯ ದಾಖಲೆಗಳನ್ನು ನೀಡಿ ಹೊಲದಲ್ಲಿ ನೆಡಬಹುದಾದ 40 ಸಸಿಗಳನ್ನು ಪಡೆಯಬಹುದಾಗಿದೆ. ಕೆಲ ಸಸಿಗಳಿಗೆ 6 ರೂಪಾಯಿ ದರ ಇದ್ದರೆ, ಮಾವು ಸೇರಿದಂತೆ ಇನ್ನಿತರೆ ಕೆಲ ಸಸಿಗಳಿಗೆ 1ಕ್ಕೆ 40 ರೂಪಾಯಿ ದರ ನಿಗದಿಪಡಿಸಲಾಗಿದೆ.
ಸಂಪರ್ಕ ಇಲಾಖೆ ಇಲ್ಲಿದೆ
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಸರ್ಕ್ಯೂಟ್ ಹೌಸ್ ಎದುರುಗಡೆ ಇರುವ ವಲಯ ಅರಣ್ಯಾಧಿಕಾರಿಗಳ ಕಚೇರಿಯ, ಸಾಮಾಜಿಕ ಅರಣ್ಯ ವಲಯ ಸಿಂಧನೂರು ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಇಲಾಖೆಯ ನಿಯಮಗಳ ಅನ್ವಯ, ಪರಿಸರ ಕಾಳಜಿಯುಳ್ಳ ಸಂಘ-ಸಂಸ್ಥೆಯವರು ಸಸಿಗಳನ್ನು ಪಡೆಯಬಹುದಾಗಿದೆ.