(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 10
“ನೋಡ್ರಿ ಏನಿಲ್ಲಂದ್ರ ನಮ್ಮೂರಾಗ ಎಂಟರಿಂದ ಹತ್ತು ಬಾಟ್ಲಿ ಅಂಗಡಿ ಅದ್ಯಾವ. ನೀವು ಯಾವ ದಾರಿಗೆ ಹೋದ್ರೂ ಒಂದನ ಅಂಗಡಿ ಇರತೈತಿ, ಒಂದೊಂದ ಅಂಗಡಿಗೆ ಸರಿ ಸುಮಾರು ದಿನಾ ಎರಡರಿಂದ ಮೂರು ಸಾವರ ರೂಪಾಯಿ ಗಿರಾಕಿ ಫಿಕ್ಸ್ ನೋಡ್ರಿ. ಇನ್ನ ಒಂದೊಂದ ಸಲ ಊರಾಗ, ಹಬ್ಬ, ಜಾತ್ರಿ ಇದ್ರಂತೂ ಅದರ ದಿಕ್ಕಾ ತಪ್ಪಿ ಹೋಗತ್ತ, ಎಲ್ಲಾ ಗಲ್ಲೆ ಪೆಟಿಗಿ ಗಲ..ಗಲ.. ಅಂತಾವ” ಹೀಗೆ ಪಟ ಪಟನೇ ಮಾತು ಉದುರಿಸಿದ್ದು ತಾಲೂಕಿನ ನದಿ ತಟದ ಗ್ರಾಮವೊಂದರ ವ್ಯಕ್ತಿ. ಈ ಊರಷ್ಟೇ ಅಲ್ಲ ಇಂತಹ ಊರುಗಳ ಪಟ್ಟಿಯನ್ನೇ ಆ ಗ್ರಾಮಸ್ಥ ನೀಡಿದರು.
ತಾಲೂಕಿನ ಕೆಲ ಊರುಗಳಲ್ಲಿ ನಾಯಿ ಕೊಡೆಗಳಂತೆ ಅಕ್ರಮ ಮದ್ಯ ಮಾರಾಟದ ಅಂಗಡಿಗಳು ತಲೆ ಎತ್ತಿದ್ದು, ಸಂಜೆಯೊಳಗೆ ಏನಿಲ್ಲವೆಂದರೂ ಕನಿಷ್ಠ ಸಾವಿರ ರೂಪಾಯಿ ಹೇಗಾದರೂ ಮಾಡಿ ಕಮಾಯಿಸಬಹುದೆಂಬ ಆಸೆಗೆ ಬಿದ್ದ ಕೆಲವರು ಕುಡಿಸೋದೆ ಒಂದು ಬ್ಯುಸಿನೆಸ್ಸಾಗಿ ಮಾಡಿಕೊಂಡಿದ್ದಾರೆ. ಹಾಲು ಮಾರೋರು ಆಲ್ಕೋ ಹಾಲು ಮಾರುವ ಹಂತಕ್ಕೆ ತಲುಪಿದ್ದಾರೆ. ಕೆಲಸ ಹುಡುಕಿ ಹುಡುಕಿ ಸಾಕಾಗಿ ಕೆಲ ಯುವಕರೂ ಅಕ್ರಮ ಮದ್ಯ ಮಾರಾಟಕ್ಕೆ ಇಳಿದಿದ್ದು, ಕೆಲ ಹಳ್ಳಿಗಳ ಪಾನ್‌ಶಾಪ್, ಕಿರಾಣಿ ಅಂಗಡಿ, ತಟ್ಟಿ ಶಾಪ್‌ಗಳಲ್ಲೂ ಈಗ ಅಕ್ರಮ ಮದ್ಯ ಸಿಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ನೈಜ ಸ್ಥಿತಿಯ ಹೂರಣವನ್ನು ಹೊರಹಾಕಿದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕೆಲವರು ಈ ಕೆಲಸಕ್ಕೆ ಕೈ ಹಾಕುತ್ತಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
‘ಊರಿಗೆ ನೀರಿಲ್ಲದಿದ್ದರೂ ಬೀರು, ಬಾಟ್ಲಿ ಸಪ್ಲೈʼ
ವಾಸ್ತವ ಕೆಲವೊಂದು ಬಾರಿ ವಿಚಿತ್ರವು, ವಿಲಕ್ಷಣವು ಹಾಗೂ ವಿಪರ್ಯಾಸವೂ ಆಗಿರುತ್ತದೆ. ಗ್ರಾಮಸ್ಥರೊಬ್ಬರು ಪ್ರಸ್ತಾಪಿಸಿದ ಹಲವು ಊರುಗಳು ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಬಾಧಿತ ಗ್ರಾಮಗಳಾಗಿವೆ. ಆ ಊರುಗಳಲ್ಲಿ ತರಹೇವಾರಿ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ, ಅಷ್ಟೇ ಬೇಗ ಮಾಯವಾಗಿವೇ ? ಆದರೆ ಇಂದಿಗೂ ಕೊಡ ಹಿಡಿದು ಜನರು ಅಲೆದಾಡುವುದು ತಪ್ಪಿಲ್ಲ. ಇನ್ನೂ ಊರಿಗೆ ಒಂದು ದಿನ ಬಸ್ಸು ಮಿಸ್ಸಾಗಬಹುದು ಆದರೆ, ಬೀರು, ಬಾಟ್ಲಿ ಸಪ್ಲೈ ಮಾತ್ರ ನಿಂತಿಲ್ಲ ಎಂಬುದು ಗ್ರಾಮಸ್ಥರ ಮಾತಾಗಿದೆ.
‘ದುಡಿದ ಹಣ ಕುಡಿತಕೆ ಹೋಯಿತು’
“ನೋಡ್ರಿ ನಮ್ಮ ಊರಾಗ ಐದಾರು ಬಾಟ್ಲಿ ಅಂಗಡಿ ಅದ್ಯಾವ. ಬಾಟ್ಲಿ ಮಾರೋರು ದಿನ 2 ಸಾವಿರ ರೂಪಾಯಿ ಕಮ್ಮಿ ಇಲ್ದಂಗ ವ್ಯಾಪಾರ ಮಾಡ್ತಾರ. ಇನ್ನ ಜಾತ್ರಿ, ಹಬ್ಬದಾಗ ಜಾಸ್ತಿ ವ್ಯಾಪಾರ ಆಗತ್ತ. ಎಕ್ಸಾಂಪಲ್ಲು ಬರೇ ಐದು ಅಂಗಡಿ ಲೆಕ್ಕ ಹಿಡಿದ್ರ, ಒಂದೊಂದು ಅಂಗಡೀಗೆ 2 ಸಾವಿರ ರೂಪಾಯಿ ಕಲೆಕ್ಷನ್ ಆದ್ರ, ದಿನಕ್ಕ ಏನಿಲ್ಲ ಅಂದ್ರ 10 ಸಾವಿರ ರೂಪಾಯಿ ಆಗತ್ತ. ತಿಂಗ್ಳಿಗೆ ಲೆಕ್ಕ ಹಾಕಿದ್ರ 3 ಲಕ್ಷ ಆಗತ್ತ, ಇನ್ನ ವರ್ಷಕ್ಕ ತಾಳೆ ಹಾಕಿದ್ರ 36 ಲಕ್ಷ ಆಗ್ತೈತಿ ನೋಡ್ರಿ. ಕೆಲವ್ರು ಕುಡ್ಯಾಕ ಖರ್ಚು ಮಾಡ್ತಾರ ನೋಡ್ರಿ” ಎಂದು ಗ್ರಾಮಸ್ಥರೊಬ್ಬರು ವಿವರಿಸಿದರು. ಅಕ್ರಮ ಮದ್ಯ ಮಾರಾಟ ಜಾಲ ಈಗ ಊರೂರುಗಳಿಗೆ ಹಬ್ಬಿ, ಮದ್ಯದ ಹೊಳೆ ಹರಿಸಿ, ಅಮಲಿನಲ್ಲಿ ಜನರ ಬೇಬಿಗೆ ಕತ್ತರಿ ಹಾಕುತ್ತಿರುವುದು ಪ್ರಜ್ಞಾವಂತರನ್ನು ದಂಗು ಬಡಿಸದೇ ಇರದು.
ಟ್ರೆಂಡ್ ಆದ ವೈನ್ ಸೇವನೆ
“ಈ ಹಿಂದೆ ಒಂದು ವರ್ಗದ ಜನರು, ಅದರಲ್ಲೂ ಶ್ರೀಮಂತರು ಮದ್ಯ ಸೇವಿಸುತ್ತಾರೆ ಎನ್ನುವ ವಾಡಿಕೆ ಇತ್ತು. ಆದರೆ ಬದಲಾದ ಸಾಮಾಜಿಕ ವಾತಾವರಣ, ಸಾಂಸ್ಕೃತಿಕ ದಾಳಿ ಹಾಗೂ ಅತೀ ಸುಲಭವಾಗಿ ಅನಧಿಕೃತ ಮದ್ಯ ಸಿಗುತ್ತಿರುವುದು, ಯುವ ಸಮುದಾಯದಲ್ಲಿ ಮದ್ಯ ಸೇವನೆ ಟ್ರೆಂಡ್ ಇಲ್ಲವೇ ಫ್ಯಾಶನ್ ಆಗಿ ಮಾರ್ಪಟ್ಟಿದೆ. ಹಳ್ಳಿಗಳಲ್ಲೂ ಈಗ ಮದ್ಯವ್ಯಸನಿಗಳ ಲೆಕ್ಕ ಹಾಕುತ್ತಾ ಹೋದರೆ, ಯುವ ಸಮುದಾಯದಲ್ಲಿ ಈ ದುಶ್ಚಟ ಅಂಟುಜಾಢ್ಯದಂತೆ ಹಬ್ಬುತ್ತಿದೆ. ಊರಿನ ನಿರ್ಜನ ಪ್ರದೇಶ, ಗುಡ್ಡ, ಪಾಳು ಕಟ್ಟಡಗಳು, ಹೊಲ-ಗದ್ದೆಗಳು, ದೇವಸ್ಥಾನದ ಆಸುಪಾಸು ಈಗ ಮದ್ಯದ ಪೌಚುಗಳು, ಒಡೆದ ಬೀರು ಬಾಟಲಿಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಈಗ ಸಾಮಾನ್ಯವಾಗಿದೆ. ಇನ್ನೂ ಯುವ ಸಮುದಾಯಲ್ಲಿ ತಮ್ಮ ವಲಯದ ಸ್ನೇಹಿತರ ಬರ್ತ್ ಡೇ ಪಾರ್ಟಿ ಹೆಸರಲ್ಲಿ ಮದ್ಯ ಸೇವನೆ ಮಾಡುವುದು ಸಾಮಾನ್ಯವಾಗುತ್ತಿದ್ದು, ಕುಡಿದು ಕುಪ್ಪಳಿಸಿ ಕೇಕೆ ಹಾಕುವ ಸದ್ದುಗಳು ಕುಗ್ರಾಮಗಳಲ್ಲೂ ಈಗ ಮಾರ್ಧನಿಸುತ್ತಿವೆ ಎನ್ನುವ ಮಾತುಗಳಿವೆ.
ಕಾನೂನು, ಸುವ್ಯವಸ್ಥೆಗೆ ಧಕ್ಕೆ
ಅಕ್ರಮ ಮದ್ಯದ ಹಾವಳಿ ಹೆಚ್ಚುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಜಗಳಗಳ ಪ್ರಮಾಣ ಹೆಚ್ಚಿದೆ. ಹಲವು ಗ್ರಾಮಗಳಲ್ಲಿ ಮದ್ಯ ವ್ಯಸನಿಗಳ ಹಾವಳಿ ಹೇಳತೀರದಾಗಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಕುಡುಕರ ಜಗಳ ವಿಕೋಪಕ್ಕೆ ಹೋಗಿ ಬಡಿದಾಟಗಳಾದ ಘಟನೆಗಳನ್ನು ಹಲವರು ಉದಾಹರಿಸುತ್ತಾರೆ.
ಪಾಲಕರ ತೊಳಲಾಟ, ಕುಟುಂಬಗಳಲ್ಲಿ ಮಡುಗಟ್ಟಿದ ಯಾತನೆ
ವಯಸ್ಸಿಗೆ ಬಂದ ಮಕ್ಕಳು ಕುಡಿತದಂತಹ ದುಶ್ಚಟಗಳಿಗೆ ಮಾರುಹೋಗುತ್ತಿರುವುದು ಪಾಲಕ ಸಮುದಾಯದಲ್ಲಿ ಮಾನಸಿಕ ತೊಳಲಾಟಕ್ಕೆ ಕಾರಣವಾದರೆ, ಮದ್ಯ ವ್ಯಸನಿಗಳಿಂದಾಗಿ ಕುಟುಂಬಗಳಲ್ಲಿ ಯಾತನೆ ಮನೆ ಮಾಡಿದೆ. ವಿಪರೀತ ಕುಡಿಯುವುದು ಎಲ್ಲೆಂದರಲ್ಲಿ ಬೀಳುವುದು, ಆನಾರೋಗ್ಯಕ್ಕೀಡಾಗುವುದು, ಸುಖಾಸುಮ್ಮನೇ ಕಾಲುಕೆದರಿ ಜಗಳ ತೆಗೆಯುವುದು ಇಂತಹ ಹಲವು ಸಮಸ್ಯೆಗಳಿಂದ ಮದ್ಯವ್ಯಸನಿಗಳ ಕುಟುಂಬಗಳು ಸಾಮಾಜಿಕವಾಗಿ ಮುಜುಗರ ಅನುಭವಿಸುತ್ತಿರುವುದ ಲ್ಲದೇ, ಆರ್ಥಿಕವಾಗಿ ತೊಂದರೆಗೆ ಸಿಲುಕಿವೆ.