ನಮ್ಮ ಸಿಂಧನೂರು, ಜೂನ್ 10
ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಹನಿ ಸುರಿಯಿತು. ಭಾನುವಾರ ರಾತ್ರಿಯೂ ಮೋಡ ಕವಿದ ವಾತಾವರಣವಿತ್ತಾದರೂ ಜಿಟಿ ಜಿಟಿ ಮಳೆಯ ಹೊರತುಪಡಿಸಿ ದೊಡ್ಡ ಮಳೆ ಸುರಿದಿಲ್ಲ. ಕಳೆದ ವಾರದ ಹಿಂದೆ ಸುರಿದ ಮಳೆಗೆ ಮಳೆಯಾಶ್ರಿತ ಪ್ರದೇಶದಲ್ಲಿ ಹಲವು ರೈತರು ಬಿತ್ತನೆ ಮಾಡಿದ್ದು, ಇನ್ನೂ ಬಹಳಷ್ಟು ಜಮೀನುಗಳಲ್ಲಿ ಬಿತ್ತನೆಗಾಗಿ ಕಾದು ಕುಳಿತಿದ್ದಾರೆ. ಇನ್ನೂ ನೀರಾವರಿ ಪ್ರದೇಶದ ಗದ್ದೆಗಳನ್ನು ರೈತರು ಹದ ಮಾಡಿಕೊಂಡಿದ್ದು, ಒಂದು ವೇಳೆ ಜಲಾಶಯ ತುಂಬಿ ಕಾಲುವೆಗಳಿಗೆ ಬೇಗ ನೀರು ಬಿಟ್ಟರೆ ಸಸಿ ಹಚ್ಚಲು ಎಲ್ಲ ರೀತಿಯ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಬಿಸಿಲ ಬೇಗೆಯಿಂದ ಬಳಲಿದ ಜನರಿಗೆ ತಂಪನೆ ವಾತಾವರಣ ಹಿತವೆನಿಸಿದೆ.