ನಮ್ಮ ಸಿಂಧನೂರು, ಜೂನ್ 10
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 10-06-2024 ಸೋಮವಾರ ದಂದು 4,817 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಳಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ಖುಷಿಗೆ ಕಾರಣವಾಗಿದೆ. ಈ ನಡುವೆ ಕಳೆದ ಮರ‍್ನಾಲ್ಕು ದಿನಗಳಿಂದ ತುಂಗಾ ಮತ್ತು ಭದ್ರಾ ನದಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಗಳಿದ್ದು, ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿಯೂ ಬಿರುಸಿನ ಮಳೆಯಾದರೆ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಜಲಾಶಯದಲ್ಲಿ ಇಂದು 4.58 ಟಿಎಂಸಿ ನೀರು ಸಂಗ್ರಹವಿದ್ದರೆ, 10 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 5.01 ಟಿಎಂಸಿ ನೀರು ಸಂಗ್ರಹವಿದ್ದರೆ, 280 ಕ್ಯೂಸೆಕ್ ನೀರು ಒಳಹರಿವಿತ್ತು, 246 ಕ್ಯೂಸೆಕ್ ನೀರು ಹೊರಗೆ ಬಿಡಲಾಗಿತ್ತು. ಜಲಾಶಯ ಅವಲಂಬಿತ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರಗಾಲ ಹಾಗೂ ತಾಪಮಾನದ ಏರಿಕೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿ, ಬೇಗನೇ ತುಂಬಿದರೆ ಕುಡಿಯುವ ನೀರಿನ ಉದ್ದೇಶಕ್ಕಾದರೂ ಕಾಲುವೆಗಳಿಗೆ ನೀರು ಹರಿಸುವಂತಾಗಲಿ ಎಂಬುದು ಜನಸಾಮಾನ್ಯರ ಆಶಯವಾಗಿದೆ.