ನಮ್ಮ ಸಿಂಧನೂರು, ಜೂನ್ 8
ಮಸ್ಕಿ ಸಮೀಪದ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಸಮಕಲ್ ಗ್ರಾಮದ ಕುಡಿಯುವ ನೀರಿನ ಕೆರೆ ತಳಕಂಡಿದ್ದು, 4 ಗ್ರಾಮ ಸೇರಿ 2 ಕ್ಯಾಂಪ್ಗಳ ಜನ ಹಾಗೂ ಜಾನುವಾರುಗಳು ನೀರಿನ ಸಮಸ್ಯೆಗೆ ಸಿಲುಕಿವೆ.
ಗ್ರಾಮದ ಕೆರೆಯಿಂದ ಗುಡದೂರು, ಹಸಮಕಲ್, ರಂಗಾಪುರ, ಪಾಂಡುರಂಗಕ್ಯಾಂಪ್, ಮುದ್ದಾಪುರ ಹಾಗೂ ಮಲ್ಲಿಕಾರ್ಜುನ ಕ್ಯಾಂಪ್ಗಳಿಗೆ ನೀರು ಸರಬರಾಜು ವ್ಯವಸ್ಥೆ ಇದ್ದು, ಕಳೆದೊಂದು ವಾರದಿಂದ ಕೆರೆಯಲ್ಲಿನ ನೀರು ತಳಕಂಡಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕುಡಿವ ನೀರನ್ನು ಕೆಲ ಗ್ರಾಮಸ್ಥರು ಖಾಸಗಿಯವರ ನೀರಿನ ಘಟಕದಿಂದ ತರುತ್ತಿದ್ದು, ಆದರೆ ಬಳಕೆ ನೀರಿಗೆ ಪರದಾಡುವಂತಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ 2023ರ ಡಿಸೆಂಬರ್ ವೇಳೆಗೆ ತುಂಗಭದ್ರಾ ಮುಖ್ಯ ಕಾಲುವೆ ಮತ್ತು ಉಪ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಳಿಸಲಾಗಿತ್ತು. ತದನಂತರ ಮಾರ್ಚ್ನಲ್ಲಿ ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 5ರಿಂದ ಮಾರ್ಚ್ 16ರವರೆಗೆ ಕಾಲುವೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಹರಿಬಿಡಲಾಗಿತ್ತು. ಈ ಸಂದರ್ಭದಲ್ಲಿ ಕೆರೆಯನ್ನು ತುಂಬಿಸಲಾಗಿತ್ತು. ಆದರೆ, ಭೀಕರ ಬೇಸಿಗೆಯ ಬಿಸಿಲಿನಿಂದಾಗಿ ಕೆರೆಯಲ್ಲಿನ ನೀರು ಮೂರುವರೆ ತಿಂಗಳಿನಲ್ಲಿ ಖಾಲಿಯಾಗಿದ್ದು, ಪುನಃ ಅಭಾವ ಸೃಷ್ಟಿಯಾಗಿದೆ.
ಪರ್ಯಾಯ ಕ್ರಮಕ್ಕೆ ಆಗ್ರಹ
ಕೆರೆಯಲ್ಲಿ ನೀರು ಖಾಲಿಯಾಗಿರುವುದರಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಾಲುವೆಗೆ ನೀರು ಬರುವವರೆಗೂ ಪರ್ಯಾಯ ನೀರಿನ ಮೂಲಗಳಾದ ಬೋರ್ವೆಲ್, ಖಾಸಗಿ ಕೆರೆಗಳನ್ನು ಪಡೆದು ಜನರಿಗೆ ನೀರು ಪೂರೈಸಬೇಕು, ಇಲ್ಲದೇ ಹೋದರೆ ಜನ-ಜಾನುವಾರುಗಳು ತೀವ್ರ ಸಮಸ್ಯೆಗೆ ಈಡಾಗುವಂತಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.