Spread the love

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 8

ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಮಟ್ಕಾ, ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆರೋಪಗಳಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ತಿಂಗಳು ಮೇ 27ರಿಂದ ಇಲ್ಲಿಯವರೆಗೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಟ್ಕಾ, ಇಸ್ಪೀಟ್ ಜೂಜಾಟ ಹಾಗೂ ಬೆಟ್ಟಿಂಗ್ ತನ್ನ ಕಬಂಧಬಾಹುಗಳನ್ನು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಹೆಚ್ಚಾಗಿ ಯುವಕರು ಇದರತ್ತ ಮಾರುಹೋಗುತ್ತಿರುವುದು ನಾಗರಿಕ ವಲಯದಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ ಸಂಘಟನೆಯೊAದು ಸಿಂಧನೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಬುಕ್ಕಿಗಳ ಬಗ್ಗೆ ಧ್ವನಿ ಎತ್ತಿ ಈ ಕುರಿತಂತೆ ಪೊಲೀಸ್ ಇಲಾಖೆಗೆ ಮನವಿ ರವಾನಿಸದ್ದನ್ನು ಸ್ಮರಿಸಬಹುದು. ಆನ್‌ಲೈನ್ ಬೆಟ್ಟಿಂಗ್‌ನ ನಡುವೆಯೂ ಇಸ್ಪೀಟ್ ಜೂಜಾಟ ಹಾಗೂ ಮಟ್ಕಾ ಹಲವೆಡೆ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಿವೆ.
ಇಸ್ಪೀಟು ಜೂಜಾಟ, ಮಟ್ಕಾ ಹಾವಳಿ !
ಈ ಉಭಯ ತಾಲೂಕು ವ್ಯಾಪ್ತಿಯ ಹಲವು ಹಳ್ಳಿಗಳು ಸೇರಿದಂತೆ ನಗರ, ಪಟ್ಟಣಗಳಲ್ಲಿ ಇಸ್ಪೀಟ್ ಜೂಜಾಟ ಹಾಗೂ ಮಟ್ಕಾ ಅಡ್ಡೆಗಳು ಗುಪ್ತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ. ಕೆಲವು ಅಡ್ಡೆಗಳು ಪ್ರಭಾವಿಗಳ ಅಣತಿಯಲ್ಲಿವೆ ಎನ್ನುವ ಬಗ್ಗೆ ಆರೋಪಗಳಿವೆ. ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸಿ, ಮಟ್ಕಾ, ಜೂಜಾಟದ ಅಡ್ಡೆಗಳ ಮೇಲೆ ದಾಳಿ ಮಾಡಿ ಏಳೆಂಟು ದಿನಗಳಲ್ಲಿ ಹಲವು ಪ್ರಕರಣ ದಾಖಲಿಸಿರುವುದು ಉತ್ತಮ ನಡೆಯಾದರೂ, ಗುಪ್ತವಾಗಿ ನಡೆಯುತ್ತಿರುವ ಇನ್ನಷ್ಟು ಅಡ್ಡೆಗಳ ಮೇಲೆ ಕಠಿಣ ಕ್ರಮ ಕೈಗೊಂಡು, ಈ ದುಶ್ಚಟಗಳಿಗೆ ಬಲಿಯಾಗಿ ಆರ್ಥಿಕವಾಗಿ ದಿವಾಳಿಯಾಗುವ ಮೂಲಕ ತೊಂದರೆಗೀಡಾಗುತ್ತಿರುವವರನ್ನು ರಕ್ಷಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *