(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ, ಸಿಂಧನೂರು, ಜೂನ್ 6
ಹತ್ತು ದಿನಕ್ಕೊಮ್ಮೆ ನೀರು ಬಿಡುವುದಾಗಿ ಹೇಳಿ ಈಗ ಹದಿನೈದು ದಿನವಾದರೂ ನೀರು ಬಿಡುತ್ತಿಲ್ಲ, ಕಾಲುವೆಗೆ ನೀರುಬಂದಾಗ ಕೆರೆಯಲ್ಲಿ ಸಂಗ್ರಹಿಸದೇ ಮೈಮರೆತು ಈಗ ನಗರಸಭೆಯವರು ಓಡಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ವಾರ್ಡ್ಗಳ ಜನರು ಖಾಲಿ ಕೊಡಗಳೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ನಗರದ ಬಸವ ಸರ್ಕಲ್‌ನಿಂದ ಮುಖ್ಯರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಗರಸಭೆಗೆ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಕೊನೆಗೆ ಪ್ರತಿಭಟನಾಕಾರರು ನಗರಸಭೆ ಗೇಟ್ ತಳ್ಳಿ ಒಳಹೋಗಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಈ ವೇಳೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ನಗರಸಭೆ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡುವವರೆಗೂ ಇಲ್ಲಿಂದ ಹೋಗುವುದಿಲ್ಲ, ರಾತ್ರಿಯಾದರೂ ಇಲ್ಲಿಯೇ ಕುಳಿತು ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿಯುತ್ತಿದ್ದಂತೆ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಆಗಮಿಸಿ, ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾ ಕಾರರು ನಗರಸಭೆ ಆಡಳಿತ, ಸದಸ್ಯರು ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಹಾಕಿದರು.
ʼವಾರದೊಳಗೆ ಡಿಸಿ, ಶಾಸಕರ ಸಭೆ ಕರೆದು ಸಮಸ್ಯೆ ಪರಿಹರಿಸಿʼ
ಈ ವೇಳೆ ನಗರಾಭಿವೃದ್ಧಿ ಹೋರಾಟ ಸಮಿತಿಯ ಚಂದ್ರಶೇಖರ ಗೊರಬಾಳ ಮಾತನಾಡಿ, ಮೇ 27 ರಂದು ಹೋರಾಟ ಸಮಿತಿ ನಗರಸಭೆಗೆ ಮನವಿ ಸಲ್ಲಿಸಿ ನಗರದಲ್ಲಿ ಉಲ್ಬಣಗೊಂಡಿರುವ ನೀರಿನ ಸಮಸ್ಯೆ ಪರಿಹರಿಸಬೇಕು ಹಾಗೂ ತೀವ್ರ ನೀರಿನ ಸಮಸ್ಯೆ ಅನುಭವಿಸುತ್ತಿರುವ ಕೊಳಗೇರಿ ಪ್ರದೇಶ ಸೇರಿದಂತೆ ಇನ್ನಿತರ ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರೂ ಪರಿಣಾಮಕಾರಿ ಕ್ರಮಗಳಾಗಿಲ್ಲ. 10 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಪ್ರಕಟಣೆ ಹೊರಡಿಸಿ 15 ದಿನಗಳಾದರೂ ಕೆಲವೊಂದು ವಾರ್ಡ್ನ ಓಣಿಗಳಿಗೆ ನೀರೇ ಬಂದಿಲ್ಲ. ಕುಡಿಯುವ ನೀರು ಪೂರೈಸಲು ಮುಖ್ಯಮಂತ್ರಿಗಳು ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಸಿಂಧನೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಪರಿಹರಿಸಲು ಏನು ಕೊರತೆ ಇದೆ ಎಂದು ಪ್ರಶ್ನಿಸಿದ ಅವರು, ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಮಾಡುವಲ್ಲಿ ಕಳೆದ 10 ವರ್ಷದಲ್ಲಿ ಆಡಳಿತ ನಡೆಸಿದ ಶಾಸಕರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಶಾಸಕರು, ಜಿಲ್ಲಾಧಿಕಾರಿಗಳು ವಾರದೊಳಗೆ ಸಭೆ ಕರೆದು ಕ್ರಮ ತೆಗೆದುಕೊಳ್ಳದೇ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ʼನೀರೊದಗಿಸುವಲ್ಲಿ ನಗರಸಭೆ ವಿಫಲʼ
ಪ್ರಧಾನ ಸಂಚಾಲಕರಾದ ವೀರಭದ್ರಗೌಡ ಅಮರಾಪುರ ಮಾತನಾಡಿ, ಕುಡಿಯುವ ನೀರು ಜನರ ಮೂಲಭೂತ ಹಕ್ಕಾಗಿದ್ದು, ನಗರಸಭೆ ಆಡಳಿತ ಜನರಿಗೆ ನೀರೊದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.ಡಿಸಿಯವರ ನಿರ್ದೇಶನವಿದ್ದರೂ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಿಸದೇ ಇರುವುದು ನಗರಸಭೆಯ ಆಡಳಿತದ ವೈಫಲವ್ಯವಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಸಂಚಾಲಕ ಡಿ.ಎಚ್.ಕಂಬಳಿ ಮಾತನಾಡಿ, ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳಾಗಿರುವುದರಿಂದ ನೀರಿನ ಸಮಸ್ಯೆಯನ್ನು ಪರಿಹರಿಸಲು ಅವರೇ ಸೂಕ್ರ ಕ್ರಮ ತೆಗೆದುಕೊಳ್ಳಬೇಕು, ನಗರಸಭೆ ಮತ್ತು ಜಿಲ್ಲಾಡಳಿತದ ಯಾವುದೇ ಸಬೂಬು ನಮಗೆ ಬೇಕಿಲ್ಲ, ನಮಗೆ ಬೇಕಿರುವುದು ಶುದ್ಧ ಕುಡಿಯುವ ನೀರು ಮಾತ್ರ. ಎಲ್ಲಿಂದ ತರುತ್ತೀರೋ ಗೊತ್ತಿಲ್ಲ, ವಾರಕ್ಕೊಮ್ಮೆ ನಮ್ಮ ವಾರ್ಡ್ಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ʼಕಾಲರಾ ಹರಡುವ ಮುನ್ನ ಎಚ್ಚೆತ್ತುಕೊಳ್ಳಿʼ
ಮಕ್ಕಳ ವೈದ್ಯ ಡಾ.ಕೆ.ಶಿವರಾಜ ಹೋರಾಟವನ್ನು ಬೆಂಬಲಿಸಿ ಮಾತನಾಡಿ, ಸಿಂಧನೂರಿನಲ್ಲಿ ಅಂದಾಜು 40 ಸಾವಿರ ಮನೆಗಳಿವೆ, 2 ಲಕ್ಷ ಜನರಿದ್ದಾರೆ. ಇಷ್ಟು ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಜವಾಬ್ದಾರಿ ನಗರಸಭೆಯದ್ದಾಗಿದೆ. ಅತ್ಯಂತ ಕಡಿಮೆ ಮಳೆ ಬೀಳುವ ರಾಜಸ್ಥಾನದ 37 ಲಕ್ಷಕ್ಕೂ ಹೆಚ್ಚು ಜನರಿರುವ ಜೈಪುರ ನಗರಕ್ಕೆ ಅಲ್ಲಿನ ಆಡಳಿತ ಸಮರ್ಪಕವಾಗಿ ನೀರೊದಗಿಸುವ ಕೆಲಸ ಮಾಡುತ್ತಿದೆ. ನೀರಿನ ಮೂಲಗಳಿದ್ದರೂ ಸಮಸ್ಯೆ ಉದ್ಭವಿಸಿರುವುದು ನಗರಸಭೆಯ ಅಸಮರ್ಪಕ ಕಾರ್ಯನಿರ್ವಹಣೆಯಿಂದ. ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು, ಅಶುದ್ಧ ನೀರು ಸೇವನೆಯಿಂದ ಕಾಲರಾ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ 1997ರ ಸಂದರ್ಭದಲ್ಲಿ ನಗರದಲ್ಲಿ ಅಶುದ್ಧ ನೀರಿನಿಂದಾಗಿ ಕಾಲರಾ ಉದ್ಭವಿಸಿ ಸಾವು-ನೋವುಗಳಾದ ಘಟನೆಗಳನ್ನು ಯಾರೂ ಮರೆಯಬಾರದು ಎಂದು ಎಚ್ಚರಿಸಿದರು.
ಸಂಚಾಲಕರಾದ ನಾಗರಾಜ್ ಪೂಜಾರ್ ಮಾತನಾಡಿ, ನೀರಿನ ಸಮಸ್ಯೆಯ ಬಗ್ಗೆ ಹೋರಾಟ ಸಮಿತಿ ನಿರಂತರ ಎಚ್ಚರಿಸುತ್ತ ಬಂದರೂ ಯಾವುದೇ ರೀತಿಯ ಮಾರ್ಗೋಪಾಯಗಳನ್ನು ಹುಡುಕುವಲ್ಲಿ ನಗರಸಭೆ ವಿಫಲವಾಗಿದೆ. ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ತೆರಿಗೆ ಪಾವತಿಸದ ಜನಸಾಮಾನ್ಯರ ನಳ ಕಟ್ ಮಾಡುವುದಾಗಿ ಹೇಳುವ ನಗರಸಭೆಯವರು, ಲಾಡ್ಜ್, ಬಾರ್ & ರೆಸ್ಟೋರೆಂಟ್, ಹೋಟೆಲ್, ಪ್ರಭಾವಿಗಳು ನಿಯಮ ಉಲ್ಲಂಘಿಸಿ ನಳಗಳನ್ನು ಹಾಕಿಕೊಂಡರೂ ಅಂತಹ ಅಕ್ರಮ ನಳಗಳನ್ನು ಕಟ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ನಳ ಸಂಪರ್ಕ ಕಡಿತಗೊಳಿಸಿ
ಸಿಂಧನೂರು ನಗರದ ಎಲ್ಲಾ ವಾರ್ಡ್ಗಳಿಗೆ ವಾರಕ್ಕೊಂದು ಬಾರಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು, ಕೊಳಗೇರಿ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಸಿಂಧನೂರು ಸುತ್ತಮುತ್ತಲಿರುವ ಖಾಸಗಿ ಕೆರೆ, ಬೋರ್‌ವೆಲ್‌ಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಂಡು ನಗರದ ಜನತೆಗೆ ಕುಡಿಯುವ ಮತ್ತು ಬಳಕೆಗೆ ನೀರು ಪೂರೈಸಬೇಕು, ತುರ್ವಿಹಾಳ ಮತ್ತು ಸಿಂಧನೂರಿನ ಕೆರೆಗಳನ್ನು ಆಧುನೀಕರಣಗೊಳಿಸಿ, ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಪತ್ರವನ್ನು ಪೌರಾಯುಕ್ತ ಮಂಜುನಾಥ ಗುಂಡೂರು ಅವರಿಗೆ ಸಲ್ಲಿಸಲಾಯಿತು.
ಪೌರಾಯುಕ್ತ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ, ನಗರಾಭಿವೃದ್ಧಿ ಹೋರಾಟ ಸಮಿತಿಯ ಬೇಡಿಕೆಗಳ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು, ಕುಡಿಯುವ ನೀರಿನ ಕೊರತೆ ಆಗದಂತೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ, ಊಹಾಪೋಹ ಹರಡುವವರ ವದಂತಿ ಯಾರೂ ಕಿವಿಗೊಡಬಾರದು. ಕಾಲುವೆಗೆ ನೀರು ಬರುವವರೆಗೂ ಜೂನ್, ಜುಲೈವರೆಗೆ ನೀರಿನ ನಿರ್ವಹಣೆ ಮಾಡಲು ಖಾಸಗಿ ಕೆರೆಗಳನ್ನು ಪಡೆಯಲಾಗುವುದು ಈ ಕುರಿತು ಈಗಾಗಲೇ ಕೆಲಸಗಳು ನಡೆಯುತ್ತಿವೆ. ತುರ್ವಿಹಾಳ ಕೆರೆ ತುಂಬಿಸಲು ಕನಿಷ್ಠ ೨೮ ದಿನಗಳು ಬೇಕು, ಆದರೆ ಕಾಲುವೆಯಿಂದ 6 ದಿನ ಮಾತ್ರ ನೀರು ಪೂರೈಕೆ ಮಾಡಲು ಅವಕಾಶ ಸಿಕ್ಕಿದ್ದು ಇದರಿಂದ ಅಗತ್ಯವಿರುವಷ್ಟು ನೀರು ತುಂಬಿಸಲು ಆಗಿಲ್ಲ, ಈ ನಡುವೆಯೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಹುಸೇನ್‌ಸಾಬ್, ಖಾದರ್ ಸುಭಾನಿ, ಸರಸ್ವತಿ ಪಾಟೀಲ್, ಎಚ್.ಜಿ.ಹಂಪಣ್ಣ, ಎಸ್.ದೇವೇಂದ್ರಗೌಡ, ಕೆ.ಬಿ.ಗೋನಾಳ, ಚಿಟ್ಟಿಬಾಬು ಬೂದಿಹಾಳಕ್ಯಾಂಪ್, ರಮೇಶ ಪಾಟೀಲ್ ಬೇರಿಗಿ, ಬಸವರಾಜ ಬಾದರ್ಲಿ, ವೀರಭದ್ರಪ್ಪ ಕುರುಕುಂದಿ, ಬಸವಂತರಾಯಗೌಡ, ಗಂಗಮ್ಮ, ಎಂ.ಲಿಂಗಪ್ಪ, ಎಂ.ಗೋಪಾಲಕೃಷ್ಣ, ಜಗದೀಶ್ ಸುಕಾಲಪೇಟೆ, ಶಂಕರ ಗುರಿಕಾರ, ಡಾ.ವಸೀಮ್, ಬಸವರಾಜ ಕೊಂಡೆ, ಪರಶುರಾಮ ತಿಡಿಗೋಳ, ಬಸವರಾಜ ಹಸಮಕಲ್, ಅಮೀನ್‌ಸಾಬ್ ನದಾಫ್, ಮಲ್ಲಿಕಾರ್ಜುನ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.