ಸಿಂಧನೂರು: ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ, ಜೂನ್ 6 ರಂದು ನಗರಸಭೆಗೆ ಮುತ್ತಿಗೆ

Spread the love

ನಮ್ಮ ಸಿಂಧನೂರು, ಜೂನ್ 5
ನಗರದಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಒತ್ತಾಯಿಸಿ ನಗರಾಭಿವೃದ್ಧಿ ಹೋರಾಟ ಸಮಿತಿ ಹಾಗೂ ನಗರದ ವಿವಿಧ ವಾರ್ಡ್ಗಳ ನಿವಾಸಿಗಳಿಂದ ಜೂನ್ 6 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಧಾನ ಸಂಚಾಲಕರ ವೀರಭದ್ರಗೌಡ ಅಮರಾಪುರ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, “ಸಿಂಧನೂರು ನಗರವು 31 ವಾರ್ಡ್ಗಳನ್ನು ಹೊಂದಿದ್ದು, 1 ಲಕ್ಷಕ್ಕೂ ಅಧಿಕ ಜನರು ಇಲ್ಲಿ ವಾಸಿಸುತ್ತಿದ್ದಾರೆ, ಈವರೆಗೆ ವಾರಕ್ಕೊಮ್ಮೆ ನೀರು ಪೂರೈಸುತ್ತಿದ್ದ ನಗರಸಭೆ, ಕಳೆದ ಮೇ 16ರಂದು ಪ್ರಕಟಣೆ ಹೊರಡಿಸಿರುವ ನಗರಸಭೆ ೧೦ ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಇದರಿಂದ ಸಾರ್ವಜನಿಕರು ಕುಡಿಯುವ ಮತ್ತು ಬಳಕೆ ನೀರಿಗಾಗಿ ಪರಿತಪಿಸುವಂತಾಗಿದೆ. ನಗರದಲ್ಲಿ ವಾಸಿಸುತ್ತಿರುವ ಜನಸಾಮಾನ್ಯರು ಸೇರಿದಂತೆ ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗದವರು, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕುಟುಂಬಗಳು 12 ರಿಂದ 15 ದಿನಗಳವರೆಗೆ ನೀರನ್ನು ಸಂಗ್ರಹಿಸಿಕೊಳ್ಳಲು ಯಾವುದೇ ರೀತಿಯ ಅನುಕೂಲತೆಗಳನ್ನು ಹೊಂದಿಲ್ಲ ಮತ್ತು ಅಂತಹ ಆರ್ಥಿಕ ಪರಿಸ್ಥಿತಿಯೂ ಅವರಿಗಿಲ್ಲ. ಹೀಗಾಗಿ ನೀರಿನ ಅಭಾವ ದಿನದಿಂದ ದಿನಕ್ಕೆ ವಿಕೋಪದ ಹಂತ ತಲುಪುತ್ತಿದೆ. ಇದಕ್ಕೆ ನಗರಸಭೆ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡದಿರುವುದೇ ಕಾರಣ” ಎಂದು ಆಪಾದಿಸಿದ್ದಾರೆ.
ಹೋರಾಟದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕರು, ವಿವಿಧ ವಾರ್ಡ್ಗಳ ಜನಸಾಮಾನ್ಯರು ಭಾಗವಹಿಸಲಿದ್ದು, ನೀರಿನ ಸಮಸ್ಯೆ ಪರಿಹರಿಸುವಂತೆ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಆಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *