ನಮ್ಮ ಸಿಂಧನೂರು, ಜೂನ್ 1
ಕಳೆದ ಹಲವು ದಿನಗಳಿಂದ ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ, ವಿವಿಧ ವಾರ್ಡ್ಗಳ ಸಾರ್ವಜನಿಕರೊಂದಿಗೆ ನಗರಸಭೆ ಕಚೇರಿ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ವೀರಭದ್ರಗೌಡ ಅಮರಾಪುರ ಹೇಳಿದರು.
ಈ ಕುರಿತು ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರು ನಾಗರಿಕರ ಮೂಲಭೂತ ಹಕ್ಕಾಗಿದೆ. ಆದರೆ, ನಗರದಲ್ಲಿ ೧೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಿದರೆ, ಜನಸಾಮಾನ್ಯರ ಗತಿಯೇನು ? ನೀರಡಿಕೆಯಾದಾಗ ಬಾಯಿ ತೋಡಿದರೆ ನೀರು ಬರಲು ಸಾಧ್ಯವೇ ? ಮಾರ್ಚ್ನಲ್ಲಿ ಕಾಲುವೆಗೆ ನೀರು ಬರುವಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ, ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೆರೆಯಲ್ಲಿ ನೀರು ತುಂಬಿಸಿಕೊಳ್ಳಲು ನಿರ್ದೇಶನ ನೀಡಿದ್ದರು. ಅಲ್ಲದೇ ಕುಡಿವ ನೀರು ಪೂರೈಕೆ ಮತ್ತು ನಿರ್ವಹಣೆಗೆ ಮಾಡುವಲ್ಲಿ ವಿಫಲರಾದರೆ ಆಯಾ ಅಧಿಕಾರಿಗಳೆ ಹೊಣೆ ಎಂದು ಸರ್ಕಾರವೇ ಹೇಳಿದ್ದರೂ ನಗರಸಭೆ ಆಡಳಿತ ನಿರ್ಲಕ್ಷö್ಯ ವಹಿಸಿದೆ ಎಂದ ಆಪಾದಿಸಿದರು.
ಸಂಚಾಲಕ ಡಿ.ಎಚ್.ಕಂಬಳಿ ಮಾತನಾಡಿ, ತುರ್ವಿಹಾಳ ಬಳಿ ಇರುವ ಕೆರೆಯನ್ನು ಪೂರ್ಣವಾಗಿ ತುಂಬಿಸದಿರುವುದು, ೮ ಮೀಟರ್ ವರೆಗೆ ನೀರು ತುಂಬಿಸಬಹುದಾದ ಕೆರೆಯಲ್ಲಿ ಕೇವಲ ೬.೫ ಮೀಟರ್ ನೀರು ತುಂಬಿಸಿರುವುದು, ಸಿಂಧನೂರಿನ ಒಣ ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್ ಹತ್ತಿರ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ, ಒಂದು ವರ್ಷ ಕಳೆದರೂ ನಗರಸಭೆ ದುರಸ್ತಿಗೆ ಮುಂದಾಗಿಲ್ಲ ಎಂದು ಹಲವು ಲೋಪಗಳ ಕುರಿತು ಪ್ರಸ್ತಾಪಿಸಿದರು.
ಜೂನ್ ೬ರಂದು ನಡೆಯುವ ಹೋರಾಟಕ್ಕೆ ನಗರದ ವಾರ್ಡ್ ನಿವಾಸಿಗಳು, ವಿವಿಧ ಸಂಘಟನೆಗಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ಡಿ.ಎಚ್.ಪೂಜಾರ್, ಕರೇಗೌಡ ಕುರುಕುಂದಿ, ಎಚ್.ಜಿ.ಹಂಪಣ್ಣ, ಬಸವಂತರಾಯಗೌಡ, ಹುಸೇನ್‌ಸಾಬ್, ಡಾ.ವಾಸೀಮ್ ಸೇರಿದಂತೆ ಇನ್ನಿತರರು ಇದ್ದರು.